ರೆಮಲ್ ಚಂಡಮಾರುತ| ಬಾಂಗ್ಲಾದಲ್ಲಿ 8 ಲಕ್ಷ ಜನರ ಸ್ಥಳಾಂತರ
PC : @Indiametdept/x
ಢಾಕಾ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ರೆಮಲ್ ಚಂಡಮಾರುತ ರವಿವಾರ ತಡರಾತ್ರಿ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಸಮುದ್ರತೀರದ ಬಳಿಯ ಗ್ರಾಮಗಳ ಕನಿಷ್ಠ 8 ಲಕ್ಷ ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಿರುವುದಾಗಿ ಸರಕಾರದ ಮೂಲಗಳು ಹೇಳಿವೆ.
ಗಂಟೆಗೆ 130 ಕಿ.ಮೀ ವೇಗದ ಸುಂಟರಗಾಳಿಯೊಂದಿಗೆ ಬಾಂಗ್ಲಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ. ಚಂಡಮಾರುತದ ಅಬ್ಬರದಿಂದ ಸಮುದ್ರದಲ್ಲಿ 12 ಮೀಟರ್ ನಷ್ಟು ಎತ್ತರದ ಅಪಾಯಕಾರಿ ಅಲೆಗಳು ಉಂಟಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿ ಅಬ್ದುಲ್ ಕಲಾಂ ಮಲಿಕ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಬಾಂಗ್ಲಾದ ಮೋಂಗ್ಲಾ ಬಂದರಿನ ಬಳಿ ಸಾಮಥ್ರ್ಯ ಮೀರಿ 50 ರಷ್ಟು ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು ಕನಿಷ್ಟ 13 ಮಂದಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಸಮುದ್ರದಲ್ಲಿ ಮುಳುಗುತ್ತಿದ್ದವರನ್ನು ಮತ್ತೊಂದು ದೋಣಿಯವರು ರಕ್ಷಿಸಿರುವುದಾಗಿ ವರದಿಯಾಗಿದೆ.