ಬಾಂಗ್ಲಾದೇಶ: ಇಸ್ಕಾನ್ ಸದಸ್ಯ ಕೃಷ್ಣದಾಸ್ ಪ್ರಭು ವಶಕ್ಕೆ?
ಸಾಂದರ್ಭಿಕ ಚಿತ್ರ | PC: freepik.com
ಢಾಕ: ಬಾಂಗ್ಲಾದೇಶದ ಹಿಂದು ಧಾರ್ಮಿಕ ಮುಖಂಡ, ಇಸ್ಕಾನ್ ಸದಸ್ಯ ಕೃಷ್ಣದಾಸ್ ಪ್ರಭುವನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ದೇಶವನ್ನು ತೊರೆಯದಂತೆ ನಿರ್ಬಂಧಿಸಲಾಗಿದೆ ಮತ್ತು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಕೃಷ್ಣದಾಸ್ ಪ್ರಭು ಆಲಿಯಾಸ್ ಚಿನ್ಮಯ ಕೃಷ್ಣದಾಸ್ ಬ್ರಹ್ಮಚಾರಿಯನ್ನು ಬಾಂಗ್ಲಾದ ಮಧ್ಯಂತರ ಸರಕಾರ ಬಂಧಿಸಿದೆ. ಇತ್ತೀಚೆಗೆ ಹಿಂದು ಸಮುದಾಯ ನಡೆಸಿದ್ದ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದ್ದ ಕಾರಣಕ್ಕೆ ದೇಶದ್ರೋಹದ ಆರೋಪ ಹೊರಿಸಲಾಗಿದೆ ಎಂದು ಭಾರತೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೃಷ್ಣದಾಸ್ ಪ್ರಭು ಬಂಧನವನ್ನು ವಿರೋಧಿಸಿ ಇಸ್ಕಾನ್ ಸದಸ್ಯರು ದೇಶದಾದ್ಯಂತ ಪ್ರತಿಭಟನಾ ಜಾಥಾ ಆಯೋಜಿಸಿದ್ದಾರೆ. ಚಿತ್ತಗಾಂಗ್, ಬರಿಸಾಲ್ ಮತ್ತು ಖುಲ್ನಾ ನಗರಗಳಲ್ಲಿ ಈಗಾಗಲೇ ಪ್ರತಿಭಟನಾ ರ್ಯಾಲಿ ನಡೆದಿದ್ದು ಕೃಷ್ಣದಾಸ್ರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಗಿದೆ. ಬಾಂಗ್ಲಾದ ಕಾನೂನು ಜಾರಿ ಪ್ರಾಧಿಕಾರದ ಪತ್ತೇದಾರಿ ವಿಭಾಗದ ಕಚೇರಿಯ ಎದುರು ಇಸ್ಕಾನ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಢಾಕಾದ ಸಹಾಬಾಗ್ನಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು `ನ್ಯಾಯಕ್ಕಾಗಿ ಸಾಯಲೂ ಸಿದ್ಧ' ಎಂದು ಘೋಷಣೆ ಕೂಗಿದ್ದಾರೆ.