ಬಾಂಗ್ಲಾ | ಚಿನ್ಮಯ್ ದಾಸ್ ಪರ ವಕಾಲತ್ತು ನಡೆಸಲು ವಕೀಲರ ನಕಾರ
ಚಿನ್ಮೋಯ್ ಕೃಷ್ಣ ದಾಸ್ | PC : indiatoday.in
ಢಾಕಾ : ದೇಶದ್ರೋಹ ಆರೋಪದಡಿ ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟಿರುವ ಹಿಂದು ಸನ್ಯಾಸಿ ಚಿನ್ಮಯ್ ಕೃಷ್ಣಪ್ರಭು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬಾರದ ಕಾರಣ ಅರ್ಜಿಯ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದ್ದು ಭಾರೀ ಹಿನ್ನಡೆ ಅನುಭವಿಸಿದಂತಾಗಿದೆ.
ಇಸ್ಕಾನ್ನ ಮಾಜಿ ಸದಸ್ಯ ಕೃಷ್ಣಪ್ರಭು ಪರ ವಕಾಲತ್ತು ವಹಿಸುವುದನ್ನು ಬಾಂಗ್ಲಾದೇಶದ ಬಾರ್ ಅಸೋಸಿಯೇಷನ್ ನಿಬರ್ಂಂಧಿಸಿತ್ತು. ಜಾಮೀನು ಅರ್ಜಿಯ ಪರ ವಾದ ಮಂಡಿಸಲು ಯಾವುದೇ ವಕೀಲರು ಮುಂದೆ ಬಾರದ ಹಿನ್ನೆಲೆಯಲ್ಲಿ ಚಟ್ಟೋಗ್ರಾಮ್ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿ ಕೃಷ್ಣಪ್ರಭುರನ್ನು ಪೊಲೀಸ್ ಕಸ್ಟಡಿಗೆ ನೀಡಿ ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಿದೆ.
ಈ ಮಧ್ಯೆ, ಢಾಕಾದಿಂದ ಸುಮಾರು 250 ಕಿ.ಮೀ ಪ್ರಯಾಣಿಸಿ ಚಟ್ಟೋಗ್ರಾಮ್ ನ್ಯಾಯಾಲಯಕ್ಕೆ ಆಗಮಿಸಿ ಕೃಷ್ಣಪ್ರಭು ಪರ ವಕಾಲತ್ತು ವಹಿಸಲು ಮುಂದಾದ ರಬೀಂದ್ರ ಘೋಷ್ ಎಂಬ ನ್ಯಾಯವಾದಿಯನ್ನು ಸ್ಥಳೀಯರು ನ್ಯಾಯಾಲಯದ ಆವರಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.