ಪದಚ್ಯುತ ಪ್ರಧಾನಿ ಹಸೀನಾ ಗಡಿಪಾರಿಗೆ ಬಾಂಗ್ಲಾ ಬಿರುಸಿನ ಪ್ರಯತ್ನ
ಶೇಕ್ ಹಸೀನಾ (Photo:PTI)
ಢಾಕಾ: ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಮುಖ್ಯ ಅಭಿಯೋಜಕ ಕರೀಂ ಎಎ ಖಾನ್ ಅವರ ಜತೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಮಾತುಕತೆ ನಡೆಸಿರುವುದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಗಡೀಪಾರಿಗೆ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ ಎಂಬ ವದಂತಿಗಳನ್ನು ದಟ್ಟವಾಗಿಸಿದೆ.
ಮಾನವತೆ ವಿರುದ್ಧ ಅಪರಾಧದ ಇತರ ಆರೋಪಿಗಳ ವಿಚಾರಣೆಯ ವಿಧಿವಿಧಾನಗಳ ಬಗ್ಗೆ ಯೂನುಸ್ ಚರ್ಚಸಿದ್ದಾರೆ ಎಂದು ತಿಳಿದುಬಂದಿದೆ.
700ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಹಿಂಸಾತ್ಮಕ ಪ್ರತಿಭಟನೆಯ ಸಂಬಂಧ ಹಸೀನಾ ವಿರುದ್ಧ ಮಧ್ಯಂತರ ಸರ್ಕಾರ ಹಾಗೂ ವಿರೋಧಿ ನಾಯಕರು ಆರೋಪ ಮಾಡಿದ್ದಾರೆ. ಈ ಪ್ರತಿಭಟನೆ ತೀವ್ರವಾದ ಬಳಿಕ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದ ವೇಳೆ ಯೂನುಸ್ ಅವರು ಕರೀಂ ಖಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಗತ್ಯ ವಿಧಿವಿಧಾನಗಳನ್ನು ಪೂರೈಸಿ ಮಾನವತೆ ವಿರುದ್ಧದ ಅಪರಾಧ ಪ್ರಕರಣವನ್ನು ಶೇಕ್ ಹಸೀನಾ ವಿರುದ್ಧ ದಾಖಲಿಸಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಫೆಲಸ್ತೀನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಮುಖ್ಯಸ್ಥರು, ಉಕ್ರೇನ್ ಯುದ್ಧಾಪರಾಧದ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ 'ಮಾನವತೆ ವಿರುದ್ಧದ ಅಪರಾಧ' ಪ್ರಕರಣ ಹಿನ್ನೆಲೆಯಲ್ಲಿ ಐಸಿಸಿಯಿಂದ ಬಂಧನ ವಾರೆಂಟ್ ಪಡೆಯುವಲ್ಲಿ ಪಾಕಿಸ್ತಾನ್ ಮೂಲದ ಬ್ರಿಟನ್ ವಕೀಲ ಕರೀಂ ಖಾನ್ ಯಶಸ್ವಿಯಾಗಿದ್ದರು.