ಬಾಸೆಲ್ ನತ್ತ ನೋಡಿದಾಗ ನನ್ನ ಸಹೋದರನನ್ನು ಕಾಣುತ್ತೇನೆ; ಆದರೆ ನಾವು ಸಮಾನರಲ್ಲ: ಆಸ್ಕರ್ ವಿಜೇತ ಇಸ್ರೇಲಿ ನಿರ್ದೇಶಕನ ಮನಕಲಕುವ ಮಾತು
►`ನೋ ಅದರ್ ಲ್ಯಾಂಡ್' ಸಾಕ್ಷ್ಯ ಚಿತ್ರದ ಸಹ ನಿರ್ದೇಶಕ ಅಬ್ರಹಾಂ

PC | wikipedia
ಲಾಸ್ ಎಂಜಲೀಸ್: `ನೋ ಅದರ್ ಲ್ಯಾಂಡ್' ಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಯೇರಿದ ನಿರ್ದೇಶಕರಾದ ಬಾಸೆಲ್ ಆದ್ರಾ , ಹಮ್ದನ್ ಬಲ್ಲಲ್, ಯುವಲ್ ಅಬ್ರಹಾಂ ಮತ್ತು ರ್ಯಾಚೆಲ್ ಸ್ಜೋರ್ ಅವರು ಗಾಝಾದಲ್ಲಿ ನ್ಯಾಯ ಮತ್ತು ಶಾಂತಿಗಾಗಿ ಪ್ರಬಲವಾದ ಮನವಿ ಮಾಡಲು ಈ ಜಾಗತಿಕ ವೇದಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು.
ಫೆಲೆಸ್ತೀನಿಯನ್ ಪತ್ರಕರ್ತ ಮತ್ತು ಪ್ರಶಸ್ತಿ ಪುರಸ್ಕೃತ ಸಾಕ್ಷ್ಯ ಚಿತ್ರದ ನಿರ್ದೇಶಕ ಬಾಸೆಲ್ ಆದ್ರಾ ಹಾಗು
ಇಸ್ರೇಲಿ ಪತ್ರಕರ್ತ ಹಾಗು ಸಹ ನಿರ್ದೇಶಕ ಅಬ್ರಹಾಂ, ಅವರು ಪ್ರಶಸ್ತಿ ಸ್ವೀಕರಿಸಿ ಆಡಿದ ಮಾತುಗಳು ಸಮಾರಂಭದ ಒಂದು ನಿರ್ಣಾಯಕ ಕ್ಷಣವಾದವು. ಗಾಝಾದಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಫೆಲೆಸ್ತೀನೀಯರ ಸ್ಥಳಾಂತರವನ್ನು ಕೊನೆಗೊಳಿಸಬೇಕೆಂದು ಇಬ್ಬರೂ ಆಗ್ರಹಿಸಿದರು.
ಆಕ್ರಮಣ ಮತ್ತು ಸ್ಥಳಾಂತರದ ನೈಜತೆಗಳನ್ನು ದಾಖಲಿಸುತ್ತಿರುವ ನಿರ್ದೇಶಕ ಆದ್ರಾ ಫೆಲೆಸ್ತೀನ್ ಜನರ ಸಂಕಷ್ಟಗಳ ಬಗ್ಗೆ ವಿವರಿಸಿದರು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಾಗತಿಕ ಸಮುದಾಯವನ್ನು ಒತ್ತಾಯಿಸಿದರು. ಅನ್ಯಾಯವನ್ನು ನಿಲ್ಲಿಸಲು ಮತ್ತು ಫೆಲೆಸ್ತೀನಿಯನ್ ಜನರ ಜನಾಂಗೀಯ ನಿರ್ಮೂಲನವನ್ನು ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಆಗ್ರಹಿಸಿದರು. ಸುಮಾರು 2 ತಿಂಗಳ ಹಿಂದೆ ನಾನು ತಂದೆಯಾಗಿದ್ದೇನೆ ಮತ್ತು ನಾನು ಈಗ ಸಾಗಿಸುತ್ತಿರುವ ಅದೇ ಜೀವನವನ್ನು ನನ್ನ ಮಗಳು ಬದುಕಬಾರದು ಎಂಬುದು ನನ್ನ ಆಶಯವಾಗಿದೆ. `ನೋ ಅದರ್ ಲ್ಯಾಂಡ್' ನಾವು ದಶಕಗಳಿಂದ ಸಹಿಸಿಕೊಳ್ಳುತ್ತಿರುವ ಮತ್ತು ವಿರೋಧಿಸುತ್ತಾ ಬಂದಿರುವ ಕಠಿಣ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ' ಎಂದವರು ಹೇಳಿದರು.
ಆದ್ರಾ ಜತೆ ಸಾಕ್ಷ್ಯಚಿತ್ರವನ್ನು ಸಹ-ನಿರ್ದೇಶಿಸಿದ ಇಸ್ರೇಲ್ ನ ಅಬ್ರಹಾಂ , ಕಥೆ ಹೇಳುವಲ್ಲಿ ಏಕತೆಯ ಶಕ್ತಿಯನ್ನು ಒತ್ತಿಹೇಳಿದರು. `ನಾವು ಫೆಲೆಸ್ತೀನಿಯರು ಮತ್ತು ಇಸ್ರೇಲಿಗಳು ಈ ಸಿನೆಮ ನಿರ್ಮಿಸಿದ್ದೇವೆ. ಯಾಕೆಂದರೆ ಒಟ್ಟಾದರೆ ನಮ್ಮ ಧ್ವನಿಗಳು ಬಲವಾಗುತ್ತದೆ' ಎಂದರು. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿ ಮತ್ತು ಗಾಝಾದಲ್ಲಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿದ ಅವರು `ನಾವು ಒಬ್ಬರನ್ನೊಬ್ಬರು ನೋಡುತ್ತೇವೆ- ಗಾಝಾ ಮತ್ತು ಅಲ್ಲಿನ ಜನರ ನಾಶ ಕೊನೆಗೊಳ್ಳಬೇಕು. ಅಕ್ಟೋಬರ್ 7ರ ದುಷ್ಕತ್ಯದಲ್ಲಿ ಕ್ರೂರವಾಗಿ ಅಪಹರಿಸಲ್ಪಟ್ಟ ಇಸ್ರೇಲಿ ಒತ್ತೆಯಾಳುಗಳನ್ನೂ ಮುಕ್ತಗೊಳಿಸಬೇಕು' ಎಂದರು.
ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರ ನಡುವಿನ ವ್ಯವಸ್ಥಿತ ಅಸಮಾನತೆಯನ್ನು ಎತ್ತಿ ತೋರಿಸಿದ ಅಬ್ರಹಾಂ, ತನ್ನ ಸಹ-ನಿರ್ದೇಶಕ ಎದುರಿಸುತ್ತಿರುವ ಕಠಿಣ ವಾಸ್ತವತೆಗಳ ಬಗ್ಗೆ ಮಾತನಾಡಿದರು. `ನಾನು ಬಾಸೆಲ್ನತ್ತ ನೋಡಿದಾಗಲೆಲ್ಲಾ ನನ್ನ ಸಹೋದರನನ್ನು ಕಾಣುತ್ತೇನೆ. ಆದರೆ ನಾವು ಸಮಾನರಲ್ಲ. ನಾಗರಿಕ ಕಾನೂನಿನಡಿಯಲ್ಲಿ ಮುಕ್ತವಾಗಿರುವ ಆಡಳಿತದಡಿ ನಾನು ವಾಸಿಸುತ್ತಿದ್ದೇನೆ. ಬಾಸೆಲ್ ಮಿಲಿಟರಿ ಕಾನೂನುಗಳ ಅಡಿಯಲ್ಲಿದ್ದು ಅದು ಅವರ ಜೀವನವನ್ನು ನಾಶಪಡಿಸುತ್ತಿದೆ ಮತ್ತು ಅದನ್ನು ಅವರು ನಿಯಂತ್ರಿಸಲು ಸಾಧ್ಯವಿಲ್ಲ' ಎಂದ ಅಬ್ರಹಾಂ, ಎರಡೂ ಜನರ ಹಕ್ಕುಗಳನ್ನು ಗುರುತಿಸುವ ರಾಜಕೀಯ ನಿರ್ಣಯಕ್ಕಾಗಿ ಒತ್ತಾಯಿಸಿದ್ದಾರೆ.
ಜನಾಂಗೀಯ ಪ್ರಾಬಲ್ಯವಿಲ್ಲದ, ಎರಡೂ ಜನರಿಗೆ ರಾಷ್ಟ್ರೀಯ ಹಕ್ಕುಗಳಿರುವ ವಿಭಿನ್ನ ಮಾರ್ಗ, ರಾಜಕೀಯ ಪರಿಹಾರವಾಗಿದೆ' ಎಂದವರು ಹೇಳಿದರು.
ಅಮೆರಿಕದ ವಿದೇಶಾಂಗ ನೀತಿ ಮತ್ತು ಇಸ್ರೇಲಿ-ಫೆಲೆಸ್ತೀನ್ ಸಂಘರ್ಷದ ಬಗ್ಗೆ ಅದರ ಧೋರಣೆಯನ್ನು ಟೀಕಿಸಿದ ಅಬ್ರಹಾಂ, ಎರಡೂ ಸಮುದಾಯಗಳ ಹೆಣೆದುಕೊಂಡ ಭವಿಷ್ಯವನ್ನು ಗುರುತಿಸುವಲ್ಲಿ ಜಾಗತಿಕ ನಾಯಕರ ವೈಫಲ್ಯವನ್ನು ಪ್ರಶ್ನಿಸಿದರು.
` ಬಾಸೆಲ್ನ ಜನರು ನಿಜವಾಗಿಯೂ ಮುಕ್ತ ಮತ್ತು ಸುರಕ್ಷಿತವಾಗಿದ್ದರೆ ನನ್ನ ಜನರೂ ನಿಜವಾಗಿಯೂ ಸುರಕ್ಷಿತವಾಗಿರುತ್ತಾರೆ ಎಂಬುದು ನಿಮಗೆ ಯಾಕೆ ಅರ್ಥವಾಗುವುದಿಲ್ಲ? ಎಂದವರು ಪ್ರಶ್ನಿಸಿದ್ದಾರೆ.
`ನೋ ಅದರ್ ಲ್ಯಾಂಡ್' ಸಾಕ್ಷ್ಯಚಿತ್ರ ಪಶ್ಚಿಮದಂಡೆಯ ತಮ್ಮ ಮನೆಯಿಂದ ಫೆಲೆಸ್ತೀನಿಯನ್ ಕುಟುಂಬವೊಂದು ಸ್ಥಳಾಂತರಗೊಳ್ಳುವ, ಆಕ್ರಮಣವು ಮಾನವ ಬದುಕಿನ ಮೇಲೆ ಉಂಟು ಮಾಡುವ ಸಂಕಷ್ಟಗಳನ್ನು ಪ್ರತಿಬಿಂಬಿಸಿದೆ. 2024ರ ಫೆಬ್ರವರಿ 16ರಂದು ಬರ್ಲಿನ್ ಅಂತರಾಷ್ಟ್ರೀಯ ಸಿನೆಮಾ ಉತ್ಸವದಲ್ಲಿ ಪ್ರದರ್ಶನಗೊಂಡಿದ್ದ ಇದು ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಪನೋರಮ ಪ್ರೇಕ್ಷಕರ ಪ್ರಶಸ್ತಿ ಮತ್ತು ಬರ್ಲಿನೇಲ್ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನೂ ಪಡೆದಿತ್ತು.