ಸುಮಾರು 2,082 ಕೋಟಿ ಹಣ ರಶ್ಯಕ್ಕೆ ಸಾಗಿಸಿದ್ದ ಬಶರ್ ಅಸ್ಸಾದ್: ವರದಿ
ಬಶರ್ ಅಸ್ಸಾದ್ | PC : PTI
ಲಂಡನ್: ಪದಚ್ಯುತಗೊಂಡಿರುವ ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಸುಮಾರು 2,082 ಕೋಟಿ ರೂ. ಹಣವನ್ನು ರಶ್ಯಕ್ಕೆ ಸಾಗಿಸಿದ್ದಾರೆ ಎಂದು `ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.
2018 ಮತ್ತು 2019ರಲ್ಲಿ ಈ ಪ್ರಕ್ರಿಯೆ ನಡೆದಿದೆ. 2 ಟನ್ಗಳಷ್ಟು 100 ಡಾಲರ್ ಮುಖಬೆಲೆಯ ಕರೆನ್ಸಿ ಮತ್ತು 500 ಯುರೋ ಮುಖಬೆಲೆಯ ಕರೆನ್ಸಿಗಳನ್ನು ಸಿರಿಯಾದಿಂದ ಮಾಸ್ಕೋದ ವುನ್ಕೊವೊ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗಿದ್ದು ಅಲ್ಲಿಂದ ನಿರ್ಬಂಧಕ್ಕೆ ಗುರಿಯಾಗಿರುವ ರಶ್ಯದ ಬ್ಯಾಂಕ್ಗಳಲ್ಲಿ ಜಮೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಅಸ್ಸಾದ್ ಅವರ ಸಂಬಂಧಿಕರು ರಹಸ್ಯವಾಗಿ ರಶ್ಯದಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದೂ ವರದಿ ಹೇಳಿದೆ. ಬಂಡುಕೋರ ಪಡೆ ಸಿರಿಯಾ ರಾಜಧಾನಿ ದಮಾಸ್ಕಸ್ನತ್ತ ಮುನ್ನುಗ್ಗಿ ಬರುತ್ತಿದ್ದಂತೆಯೇ ಡಿಸೆಂಬರ್ 8ರಂದು ಅಸ್ಸಾದ್ ರಶ್ಯಾಕ್ಕೆ ಪಲಾಯನ ಮಾಡಿದ್ದರು. ಅಸ್ಸಾದ್ ಸರಕಾರ ದೇಶವನ್ನು ಲೂಟಿ ಮಾಡಿದೆ ಮತ್ತು ಯುದ್ಧಕ್ಕೆ ಹಣಕಾಸು ಕ್ರೋಢೀಕರಿಸಲು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ವಿಪಕ್ಷಗಳು ಹಾಗೂ ಅಸ್ಸಾದ್ ಆಡಳಿತದ ವಿರೋಧಿಗಳು ನಿರಂತರ ಆರೋಪಿಸುತ್ತಿದ್ದರು.
ಅಸ್ಸಾದ್ ಆಡಳಿತವನ್ನು ಬೆಂಬಲಿಸುವ ರಶ್ಯದ ಕಂಪೆನಿಗಳು ಸಿರಿಯಾದ ಪ್ರಾಸ್ಪೇಟ್ ಪೂರೈಕೆ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಸ್ಸಾದ್ ಮತ್ತವರ ಆಪ್ತರು ಅಂತರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಇಂಧನ ಕಳ್ಳಸಾಗಣೆ ಪ್ರಕ್ರಿಯೆಯ ಮೂಲಕ ಅಪಾರ ಹಣ ಗಳಿಸಿದ್ದಾರೆ ಎಂದು `ಫೈನಾನ್ಶಿಯಲ್ ಟೈಮ್ಸ್' ವರದಿ ಹೇಳಿದೆ.