ಇಸ್ರೇಲ್-ಫೆಲೆಸ್ತೀನ್ ವರದಿ ಮಾಡುವಾಗ BBC ಯಿಂದ ಇಬ್ಬಗೆಯ ನೀತಿ !
ಅಲ್ ಜಝೀರಾಗೆ ಬರೆದ ಪತ್ರದಲ್ಲಿ 8 ಬಿಬಿಸಿ ಪತ್ರಕರ್ತರ ಆರೋಪ
Photo : newslaundry.com
ಹೊಸದಿಲ್ಲಿ : ಬಿಬಿಸಿ (ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್)ಯ ಎಂಟು ಪತ್ರಕರ್ತರು ಅಲ್ ಜಝೀರಾಗೆ ಪತ್ರ ಬರೆದು ಇಸ್ರೇಲ್ ಮತ್ತು ಫೆಲೆಸ್ತೀನ್ ಕುರಿತು ವರದಿ ಮಾಡುವಾಗ ತಾವು ಕೆಲಸ ಮಾಡುವ ಮಾಧ್ಯಮ ಸಂಸ್ಥೆ ಇಬ್ಬಗೆಯ ನೀತಿ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ ಎಂದು newslaundry.com ವರದಿ ಮಾಡಿದೆ.
ಅಲ್ ಜಝೀರಾ ಪ್ರಕಾರ, 2,300 ಪದಗಳ ಈ ಪತ್ರದಲ್ಲಿ ಗಾಝಾ ಪಟ್ಟಿಯಲ್ಲಿ ವರದಿ ಮಾಡುವಾಗ ಬಿಬಿಸಿ ಅನುಸರಿಸಿದ ನೀತಿಯನ್ನು ಬಿಚ್ಚಿಡಲಾಗಿದೆ. ವಾಸ್ತವಾಗಿ ಗಾಝಾದಲ್ಲಿ ಇಸ್ರೇಲ್ ನಿಂದ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿ ಮಾಡುವಲ್ಲಿ ಬಿಬಿಸಿ ಲೋಪವೆಸಗಿದೆ ಎಂದು ಅದರ ಪತ್ರಕರ್ತರು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ ಜಝೀರಾ ಆ ಎಂಟು ಪತ್ರಕರ್ತರನ್ನು ಹೆಸರಿಸಲಿಲ್ಲ. ಆದರೆ ಅವರೆಲ್ಲರೂ ಬ್ರಿಟನ್ ನಲ್ಲಿ ನೆಲೆಸಿದ್ದಾರೆ ಎಂದು ಹೇಳಿದೆ.
ಇಸ್ರೇಲಿ ಆಕ್ರಮಣದ ಬಲಿಪಶುಗಳು ಮತ್ತು ಸಂತ್ರಸ್ತ ಕುಟುಂಬಗಳ ಸಂದರ್ಶನಗಳನ್ನುಮಾಡುವಾಗ, ಬಿಬಿಸಿಯು ಫೆಲೆಸ್ತೀನಿನ ನಾಗರಿಕರನ್ನು ಮಾನವೀಯ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂದು ಪತ್ರವು ಉಲ್ಲೇಖಿಸಿದೆ. ಸಂದರ್ಶನ ಮಾಡುವಾಗ ಪತ್ರಕರ್ತರು "ಹಮಾಸ್ ಅನ್ನು ಖಂಡಿಸುತ್ತೀರಾ" ಎಂದು ಫೆಲೆಸ್ತೀನಿನ ನಾಗರಿಕರಿಗೆ ಕೇಳಿದ್ದಾರೆ. ಇಸ್ರೇಲ್ ದಾಳಿಯನ್ನು, ಅಲ್ಲಿಯ ಸರ್ಕಾರವನ್ನು ಖಂಡನೆ ಮಾಡುವ ಯಾವ ಅಂಶಗಳೂ ಅವರ ವರದಿಯಲ್ಲಿ ಇರಲಿಲ್ಲ ಎಂದು ಆ ಪತ್ರಕರ್ತರು ದೂರಿದ್ದಾರೆ.
"ಅಕ್ಟೋಬರ್ 7 ರಿಂದ ಸಾವಿರಾರು ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ನಮ್ಮ ಸಂಪಾದಕೀಯದ ನಿಲುವು ಯಾವಾಗ ಬದಲಾಗಲಿದೆ?" ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. "ಅಧಿಕೃತ ಮಾಹಿತಿ, ಪುರಾವೆಗಳನ್ನು ಆಧರಿಸಿ ಪಕ್ಷಪಾತವಿಲ್ಲದ ಮಾನವೀಯ ಸಂಶೋಧನೆಗಳನ್ನು ಮಾಡಿ ವರದಿ ಮಾಡಲು ನಾವು BBC ಯನ್ನು ಕೇಳುತ್ತಿದ್ದೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ಗಾಝಾದಲ್ಲಿ ನಾಗರಿಕರ ಸಾವು ಹೆಚ್ಚಾದಂತೆ ಫೆಲೆಸ್ತೀನ್ ಮೇಲಿನ ಆಕ್ರಮಣಕ್ಕೆ ಪಾಶ್ಚಿಮಾತ್ಯ ದೇಶಗಳಿಗಿದ್ದ ಹಸಿವು ಕ್ಷೀಣಿಸಿತು. ಬಳಿಕ ಬಿಬಿಸಿ ಫೆಲೆಸ್ತೀನ್ ನಾಗರಿಕರ ವರದಿಗಳನ್ನು ಮಾನವೀಯ ನೆಲೆಗಳಲ್ಲಿ ಬಿತ್ತರಿಸಲು ಪ್ರಾರಂಭಿಸಿತು. ಮಾನವೀಯ ನೆಲೆಯ ವರದಿ ತುಂಬಾ ತಡವಾಗಿ ಬಂತು ಎಂದು ಹಲವರಿಗೆ ಭಾಸವಾಯಿತು. ಬ್ರಿಟನ್ ಮತ್ತು ಅಮೇರಿಕ ಸರ್ಕಾರಗಳು ಫೆಲೆಸ್ತೀನಿನ ಮೇಲೆ ಇಸ್ರೇಲ್ ಆಕ್ರಮಣದ ವಿಚಾರದಲ್ಲಿ ತೆಗೆದುಕೊಂಡ ಕ್ರಮಗಳು ಬಿಬಿಸಿಯ ವರದಿಗಾರಿಕೆ ಮೇಲೆ ಪ್ರಭಾವ ಬೀರಿವೆ ಎಂದು ಪತ್ರ ಹೇಳುತ್ತದೆ.
ಈ ಕುರಿತು ಪ್ರತಿಕ್ರಿಯೆಗಾಗಿ ಅಲ್ ಜಝೀರಾ ಸಂಪರ್ಕಿಸಿದಾಗ, ಬಿಬಿಸಿ ವಕ್ತಾರರು ಪತ್ರದಲ್ಲಿರುವ ಆರೋಪಗಳನ್ನು ನಿರಾಕರಿಸಿದರು: "ಇಸ್ರೇಲಿ ಸರ್ಕಾರ, ಹಮಾಸ್, ಫೆಲೆಸ್ತೀನ್ ಪ್ರತಿನಿಧಿಗಳು ಅಥವಾ ಇತರ ನಾಯಕರನ್ನು ಸಂದರ್ಶಿಸುವಾಗ ನಾವು ದೃಢವಾಗಿರುತ್ತೇವೆ. ಅವರಿಗೆ ಪ್ರಶ್ನೆ ಕೇಳುತ್ತೇವೆ. ನಮ್ಮ ಸುದ್ದಿಯ ಗುರಿಯ ಬಗ್ಗೆ ನಮಗೆ ತಿಳಿದಿದೆ" ಎಂದು ಹೇಳಿದ್ದಾರೆ