ಕೆನಡಾದಲ್ಲಿ ಮಂಗಳೂರಿನ ಯುವಕರ ಬ್ಯಾರೀಸ್ ಸೂಪರ್ ಮಾರ್ಕೆಟ್ ಅದ್ದೂರಿ ಶುಭಾರಂಭ

ಒಂಟಾರಿಯೊ: ಕೆನಡಾದ ಒಂಟಾರಿಯೊದಲ್ಲಿನ ಮಿಸಿಸವುಗದಲ್ಲಿ ಮಂಗಳೂರಿನ ಮೂವರು ಬ್ಯಾರಿ ಯುವಕರು ಸ್ಥಾಪಿಸಿರುವ ಬ್ಯಾರೀಸ್ ಸೂಪರ್ ಮಾರ್ಕೆಟ್ ಫೆಬ್ರವರಿ 1ರಂದು ಅದ್ದೂರಿಯಾಗಿ ಪ್ರಾರಂಭಗೊಂಡಿತು. ಈ ಅಪೂರ್ವ ಕ್ಷಣಕ್ಕೆ ಅಲ್ಲಿನ ಗಣ್ಯರು ಹಾಗೂ ಸ್ಥಳೀಯರು ಸಾಕ್ಷಿಯಾದರು.
ಮಿಸ್ಸಿಸುವಗ-ಎರಿನ್ ಮಿಲ್ಸ್ ನ ಸಂಸತ್ ಸದಸ್ಯೆ ಇಕ್ರಾ ಖಾಲಿದ್ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಥಳೀಯ ಜನತೆಯ ಅಗತ್ಯಗಳನ್ನು ಪೂರೈಸುವಲ್ಲಿ ಬ್ಯಾರೀಸ್ ಸೂಪರ್ ಮಾರ್ಕೆಟ್ ನ ಬದ್ಧತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಉತ್ತರ ಅಮೆರಿಕ ಮುಸ್ಲಿಂ ಸಮುದಾಯದ ಗಣ್ಯರಾದ ಡಾ. ಅಬ್ದಲ್ಲಾ ಇದ್ರಿಸ್ ಅಲಿ ಅವರು ಉಪಸ್ಥಿತರಿದ್ದರು. ಟೊರೊಂಟೊದಲ್ಲಿನ ಪ್ರಪ್ರಥಮ ಪೂರ್ಣಾವಧಿಯ ಇಸ್ಲಾಮಿಕ್ ಶಾಲೆ ಇಸ್ನಾದ ಸ್ಥಾಪಕರಾದ ಡಾ. ಅಲಿ ಅವರು ಮೂವರು ಯುವಕರ ಹೊಸ ಸಾಹಸಕ್ಕೆ ಶುಭ ಕೋರಿದರು. ಅವರೊಂದಿಗೆ ಇಸ್ನಾದ ಇಮಾಂ ಆದ ಶೇಖ್ ಹೊಸಾಂ ಹಿಲಾಲ್ ಸಮಾರಂಭಕ್ಕೆ ಕಳೆ ತಂದರು. ಕಾರ್ಯಕ್ರಮದಲ್ಲಿ ಹಾಲ್ಟನ್ ಸರಕಾರಿ ಸಂಬಂಧಗಳ ಪ್ರಾಂಶುಪಾಲರು ಹಾಗೂ ಮಾಜಿ ಓಕ್ ವಿಲ್ಲೆ ಪ್ರಾಂತೀಯ ಕೌನ್ಸಿಲರ್ ಸ್ಟೀಫನ್ ಸ್ಪಾರ್ಲಿಂಗ್ ಉಪಸ್ಥಿತರಿದ್ದರು.
ಅಸಾಧಾರಣ ಸಾರ್ವಜನಿಕ ಸೇವೆ ಹಾಗೂ ಸಾಮುದಾಯಿಕ ವಕಾಲತ್ತಿಗಾಗಿ ಕೆನಡಾ ಹೌಸ್ ಆಫ್ ಕಾಮನ್ಸ್ ನ ವಿಶೇಷ ಮಾನ್ಯತಾ ಪ್ರಶಸ್ತಿಯನ್ನು ಬ್ಯಾರೀಸ್ ಸೂಪರ್ ಮಾರ್ಕೆಟ್ ಗೆ ನೀಡಿ ಇಕ್ರಾ ಖಾಲಿದ್ ಗೌರವಿಸಿದರು.
ಕಾರ್ಯಕ್ರಮದಲ್ಲಿ ಐಕ್ಯತೆ ಹಾಗೂ ಸಂಭ್ರಮಾಚರಣೆಯ ಸ್ಪೂರ್ತಿಯೊಂದಿಗೆ ಕೆನಡಾದ ಬ್ಯಾರಿ, ತುಳು, ಕೊಂಕಣಿ ಹಾಗೂ ಮಂಗಳೂರಿನ ಇತರ ಸಮುದಾಯಗಳ ಜನರು ಭಾಗವಹಿಸಿದ್ದರು.
ಬ್ಯಾರೀಸ್ ಸೂಪರ್ ಮಾರ್ಕೆಟ್ ನ ಪ್ರಾರಂಭವು ಕೇವಲ ವಾಣಿಜ್ಯ ಮಳಿಗೆಗಿಂತ ಮಹತ್ವದ್ದಾಗಿದ್ದು, ಅದು ವೈವಿಧ್ಯತೆ, ಒಳಗೊಳ್ಳುವಿಕೆ ಹಾಗೂ ಸಾಮುದಾಯಿಕ ಅಭಿವೃದ್ಧಿಯ ಬದ್ಧತೆಯನ್ನು ಹೊಂದಿದೆ. ಬ್ಯಾರೀಸ್ ಸೂಪರ್ ಮಾರ್ಕೆಟ್ ತನ್ನ ಪಯಣ ಪ್ರಾರಂಭಿಸಿದ್ದು, ಅದು ಕೇವಲ ಶಾಪಿಂಗ್ ತಾಣವಾಗುವ ಬದಲು, ಎಲ್ಲರೂ ತಮ್ಮ ಮನೆಯೆಂದೇ ಭಾವಿಸುವಂಥ ಆಹ್ಲಾದಕರ ಸಾಮುದಾಯಿಕ ಸ್ಥಳವನ್ನಾಗಿಸುವ ಗುರಿ ಹೊಂದಿದೆ ಎಂದು ಅದರ ಪಾಲುದಾರರಾದ ಹಫೀಝ್ ಅಬ್ದುಲ್ ಖಾದರ್ , ಮುನೀರ್ ಅಹ್ಮದ್ ಹಾಗೂ ಹಾಶಿಮ್ ಅಶ್ರಫ್ ತಿಳಿಸಿದ್ದಾರೆ.
(ಹಫೀಝ್ ಅಬ್ದುಲ್ ಖಾದರ್, ಮುನೀರ್ ಅಹ್ಮದ್, ಹಾಶಿಮ್ ಅಶ್ರಫ್)