ಯುರೋಪ್ನ ಪ್ರಮುಖ ಭದ್ರತಾ ಒಪ್ಪಂದ ಅಮಾನತಿಗೆ ಬೆಲಾರುಸ್ ಸಂಸತ್ ಒಪ್ಪಿಗೆ
PC : indianexpress.
ಮಿನ್ಸ್ಕ್: ಯುರೋಪ್ ಖಂಡದ ಪ್ರಮುಖ ಭದ್ರತಾ ಒಪ್ಪಂದವಾಗಿದ್ದ ಸಾಂಪ್ರದಾಯಿಕ ಪಡೆಗಳ ಒಡಂಬಡಿಕೆಯಿಂದ ಹೊರಬರುವ ಪ್ರಸ್ತಾವನೆಗೆ ಬೆಲಾರುಸ್ನ ಸಂಸತ್ ಬುಧವಾರ ಅನುಮೋದನೆ ನೀಡಿದೆ. 1990ರಲ್ಲಿ ಸಹಿ ಹಾಕಲಾಗಿದ್ದ ಈ ಪ್ರಮುಖ ಒಪ್ಪಂದದಿಂದ ರಶ್ಯ ಕಳೆದ ವರ್ಷ ಹೊರಬಂದಿತ್ತು.
ಈ ತಿಂಗಳ ಆರಂಭದಲ್ಲಿ ಬೆಲಾರುಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಷೆಂಕೊ ಮಸೂದೆಯಲ್ಲಿ ಸಂಸತ್ನಲ್ಲಿ ಮಂಡಿಸಿದ್ದರು. ಒಪ್ಪಂದವನ್ನು ಅಮಾನತುಗೊಳಿಸುವ ಮಸೂದೆಯನ್ನು ಸಂಸತ್ ಅವಿರೋಧವಾಗಿ ಅನುಮೋದಿಸಿದ್ದು ಅಧ್ಯಕ್ಷರು ಸಹಿ ಹಾಕಿದರೆ ಜಾರಿಗೊಳ್ಳಲಿದೆ. ಮಸೂದೆಯನ್ನು ಸಂಸತ್ ಅನುಮೋದಿಸಿರುವುದರಿಂದ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬೆಲಾರುಸ್-ರಶ್ಯದ ಮೈತ್ರಿ ರಚನೆಗೆ ದಾರಿ ಸುಗಮವಾಗಲಿದೆ. 1990ರಲ್ಲಿ ಸಹಿಹಾಕಲಾದ ಒಪ್ಪಂದವು ಯುರೋಪ್ನಲ್ಲಿ ಟ್ಯಾಂಕ್ಗಳು, ಯುದ್ಧ ವಾಹನಗಳು, ಯುದ್ಧವಿಮಾನಗಳು ಮತ್ತು ಭಾರೀ ಫಿರಂಗಿಗಳ ನಿಯೋಜನೆಯ ಮೇಲೆ ಮಿತಿ ವಿಧಿಸುತ್ತದೆ. ಪಾಶ್ಚಿಮಾತ್ಯ ದೇಶಗಳು ಹಾಗೂ ಶೀತಲ ಯುದ್ಧದ ಯುಗದ ವಾರ್ಸಾ ಒಪ್ಪಂದದ ಭಾಗವಾಗಿದ್ದ ದೇಶಗಳ ನಡುವೆ ಮಿಲಿಟರಿ ಸಮತೋಲನ ಕಾಯ್ದುಕೊಳ್ಳುವುದು ಈ ಒಪ್ಪಂದದ ಉದ್ದೇಶವಾಗಿದೆ. ರಶ್ಯವು 2023ರ ನವೆಂಬರ್ನಲ್ಲಿ ಒಪ್ಪಂದದಿಂದ ಹಿಂದೆ ಸರಿದಿತ್ತು.
ಒಪ್ಪಂದದ ಪ್ರಕಾರ ಬೆಲಾರುಸ್ನ ಸಶಸ್ತ್ರ ಪಡೆಗಳ ಬಲ 1,00,000 ಸಿಬಂದಿಗಳನ್ನು ಮೀರಬಾರದು. ಪ್ರಸ್ತುತ ಬೆಲಾರುಸ್ 63,000 ಯೋಧರನ್ನು ಹಾಗೂ 3 ಲಕ್ಷ ಮೀಸಲು ಯೋಧರನ್ನು ಹೊಂದಿದೆ. ಇದೀಗ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ ಬೆಲಾರುಸ್ಗೆ ತುಕಡಿ ಮತ್ತು ಶಸ್ತ್ರಾಸ್ತ್ರಗಳನ್ನು ವಿಸ್ತರಿಸಲು ಅವಕಾಶವಿದೆ. ಉಕ್ರೇನ್ ಹಾಗೂ ನೇಟೊ ಸದಸ್ಯರಾದ ಲಾತ್ವಿಯಾ, ಲಿಥ್ವೇನಿಯಾ ಮತ್ತು ಪೋಲ್ಯಾಂಡ್ ಜತೆ ಗಡಿ ಹಂಚಿಕೊಂಡಿರುವ ಬೆಲಾರುಸ್ ಅನ್ನು ಉಕ್ರೇನ್ಗೆ ತುಕಡಿ ಕಳುಹಿಸುವ ವೇದಿಕೆಯಾಗಿ ರಶ್ಯ ಬಳಸಿಕೊಂಡಿದೆ. ಜತೆಗೆ, ಬೆಲಾರುಸ್ನಲ್ಲಿ ತನ್ನ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿ ನೇಟೊ ದೇಶಗಳಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ