ಇಸ್ರೇಲ್ ಕೆಣಕಬೇಡಿ: ಇರಾನ್, ಹಿಜ್ಬುಲ್ಲಾಗೆ ನೆತನ್ಯಾಹು ಎಚ್ಚರಿಕೆ
ಬೆಂಜಮಿನ್ ನೆತನ್ಯಾಹು | PHOTO: PTI
ಟೆಲ್ಅವೀವ್ : ಉತ್ತರ ಇಸ್ರೇಲ್ ನಲ್ಲಿ ನಮ್ಮನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ಮತ್ತು ಹಿಜ್ಬುಲ್ಲಾಗೆ ಕಠಿಣ ಸಂದೇಶ ರವಾನಿಸಿದ್ದಾರೆ.
ಇಸ್ರೇಲ್ ಸಂಸತ್ತಿನಲ್ಲಿ ಸೋಮವಾರ ಮಾತನಾಡಿದ ಅವರು ‘ಹಮಾಸನ್ನು ಸೋಲಿಸಲು ಜಗತ್ತು ಒಗ್ಗೂಡುವ ಅಗತ್ಯವಿದೆ. ಹಮಾಸ್ ಮತ್ತು ನಾಝಿಗಳ ಮಧ್ಯೆ ವ್ಯತ್ಯಾಸವಿಲ್ಲ. ಈ ಯುದ್ಧ ನಿಮ್ಮೆಲ್ಲರ ಯುದ್ಧವೂ ಆಗಿದೆ’ ಎಂದು ಹೇಳಿದರು.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ಸೋಮವಾರದ ಕೆಲವು ಬೆಳವಣಿಗೆಗಳು:
* ನೆಲದ ಮೇಲಿನ ಆಕ್ರಮಣದ ಬಗ್ಗೆ ಇಸ್ರೇಲ್ ಎಚ್ಚರಿಕೆ ನೀಡಿರುವಂತೆಯೇ 1 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರು ಗಾಝಾದಿಂದ ಪಲಾಯನ ಮಾಡಿದ್ದಾರೆ.
* ಸಂಘರ್ಷ ಆರಂಭವಾದಂದಿನಿಂದ 2,750 ಫೆಲೆಸ್ತೀನೀಯರು ಹತರಾಗಿದ್ದು 9,700 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಸೋಮವಾರದ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಗಾಝಾದಲ್ಲಿ 455 ಫೆಲೆಸ್ತೀನೀಯರು ಮೃತಪಟ್ಟಿದ್ದು 856 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
* 1,400ಕ್ಕೂ ಅಧಿಕ ಇಸ್ರೇಲಿಯನ್ನರು ಮೃತಪಟ್ಟಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
* ಗಾಝಾದಲ್ಲಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿವೆ. ಆಸ್ಪತ್ರೆಗಳಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
* ಸುಮಾರು 6 ಲಕ್ಷ ಜನರನ್ನು ಗಾಝಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಳಿಸಲಾಗಿದೆ. ಸುಮಾರು 3 ಲಕ್ಷ ಜನರನ್ನು ವಿಶ್ವಸಂಸ್ಥೆ ಪರಿಹಾರ ಶಿಬಿರಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ.
* ಗಾಝಾ ಪ್ರದೇಶದಲ್ಲಿ ನಾಪತ್ತೆಯಾಗಿರುವರ ಸಂಖ್ಯೆ 1 ಸಾವಿರವನ್ನು ದಾಟಿದ್ದು ಇವರು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಫೆಲೆಸ್ತೀನಿಯನ್ ನಾಗರಿಕ ರಕ್ಷಣಾ ಪಡೆ ಹೇಳಿದೆ.
* ಇಸ್ರೇಲ್ ನ ಸುಮಾರು 150 ಒತ್ತೆಯಾಳುಗಳನ್ನು ಹಮಾಸ್ ಭೂಗತ ಬಂಕರ್ ಹಾಗೂ ಸುರಂಗಗಳಲ್ಲಿ ಇರಿಸಿದೆ ಎಂಬ ವರದಿಯಿದ್ದು ಇದು ಇಸ್ರೇಲ್ ಕಾರ್ಯಾಚರಣೆಗೆ ಹಿನ್ನಡೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
* ಇಸ್ರೇಲ್ ನೆಲದ ಮೇಲಿನ ಕಾರ್ಯಾಚರಣೆ ಆರಂಭಿಸಿದರೆ ಇದರಿಂದ ಭೀಕರ ಪರಿಣಾಮ ಆಗಬಹುದು ಮತ್ತು ಅಸಾಮಾನ್ಯ ಮಟ್ಟದ ನರಮೇಧಕ್ಕೆ ಕಾರಣವಾಗಬಹುದು ಎಂದು ಅರಬ್ ಲೀಗ್ ಮತ್ತು ಆಫ್ರಿಕನ್ ಯೂನಿಯನ್ ಎಚ್ಚರಿಕೆ ನೀಡಿದೆ.
* ಇಸ್ರೇಲ್ ತನ್ನ ಭೂಸೇನೆಯ ಹಿರಿಯ ಕಮಾಂಡರ್ಗಳಿಗೆ ಗಾಝಾ ಪಟ್ಟಿಯ ಬಗ್ಗೆ ಪರಿಚಯ ಮಾಡಿಕೊಡಲು ಯುದ್ಧವಿಮಾನದ ಮೂಲಕ ಅವರನ್ನು ಗಾಝಾ ಪ್ರದೇಶದ ಸುತ್ತ ಕರೆದೊಯ್ದು ಪ್ರದೇಶದ ಪಕ್ಷಿನೋಟವನ್ನು ನೀಡುತ್ತಿದೆ ಎಂದು ವರದಿಯಾಗಿದೆ.