ಉಕ್ರೇನ್ಗೆ ಅಮೆರಿಕ ನೆರವು ಸ್ಥಗಿತ; ಶಾಂತಿಗೆ ಅತ್ಯುತ್ತಮ ಕೊಡುಗೆ: ರಶ್ಯ ಶ್ಲಾಘನೆ

Photo : AFP
ಮಾಸ್ಕೋ: ಉಕ್ರೇನ್ಗೆ ಅಮೆರಿಕದ ಮಿಲಿಟರಿ ನೆರವು ಸ್ಥಗಿತ ಶಾಂತಿಯ ಪ್ರಯತ್ನಕ್ಕೆ ಒಂದು ಅತ್ಯುತ್ತಮ ಕೊಡುಗೆಯಾಗಿದೆ ಎಂದು ರಶ್ಯ ಮಂಗಳವಾರ ಶ್ಲಾಘಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಈ ಕ್ರಮದ ವಿವರಗಳನ್ನು ರಶ್ಯಕ್ಕೆ ಸ್ಪಷ್ಟಪಡಿಸುವ ಅಗತ್ಯವಿದೆ ಎಂದಿದೆ.
ಫೆಬ್ರವರಿ 12ರಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಟ್ರಂಪ್ `ತನ್ನನ್ನು ಶಾಂತಿ ಸ್ಥಾಪಕ' ಎಂದು ಸ್ಮರಿಸಿಕೊಳ್ಳಬೇಕೆಂಬುದು ತನ್ನ ಆಶಯವಾಗಿದೆ ಎಂದಿದ್ದರು. ಉಕ್ರೇನ್ ನ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಕ್ರಮಗಳು ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕದ ನೀತಿಯು ಮೂರನೇ ವಿಶ್ವಯುದ್ದದ ಅಪಾಯವನ್ನು ಹೆಚ್ಚಿಸಬಹುದು ಎಂದು ಟ್ರಂಪ್ ಕಳವಳ ವ್ಯಕ್ತಪಡಿಸಿದ್ದರು.
`ಇದು ಸತ್ಯವಾಗಿದ್ದರೆ, ಖಂಡಿತಾ ಉಕ್ರೇನ್ ಆಡಳಿತವನ್ನು ಶಾಂತಿ ಪ್ರಕ್ರಿಯೆಗೆ ಪ್ರೋತ್ಸಾಹಿಸಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಈ ಯುದ್ಧಕ್ಕೆ ಇದುವರೆಗೆ ಪ್ರಮುಖ ಶಸ್ತಾಸ್ತ್ರ ಪೂರೈಕೆದಾರರು ಅಮೆರಿಕ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಶಸ್ತ್ರಾಸ್ತ್ರ ಪೂರೈಕೆಯನ್ನು ಅಮೆರಿಕ ನಿಲ್ಲಿಸಿದರೆ ಅದು ಖಂಡಿತಾ ಶಾಂತಿಯ ಪ್ರಕ್ರಿಯೆಗೆ ಅತ್ಯುತ್ತಮ ಕೊಡುಗೆಯಾಗಲಿದೆ. ಉಕ್ರೇನ್ ನಲ್ಲಿ ಶಾಂತಿಗಾಗಿ ಟ್ರಂಪ್ ಅವರ ಬಯಕೆಯನ್ನು ರಶ್ಯ ಸ್ವಾಗತಿಸುತ್ತದೆ. ಕೆಲವು ಹೇಳಿಕೆಗಳನ್ನು, ಕ್ರಿಯೆಗಳನ್ನು ನಾವು ನೋಡಿದ್ದೇವೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದವರು ಹೇಳಿದ್ದಾರೆ.