"ಗಾಝಾ ಆಸ್ಪತ್ರೆ ಮೇಲಿನ ದಾಳಿ ಇಸ್ರೇಲ್ ಮಾಡಿದ್ದಲ್ಲ, ಅದು ಬೇರೆ ತಂಡದ ಕೃತ್ಯ": ಬೈಡನ್
PHOTO : x/haaretzcom
ಟೆಲ್ ಅವೀವ್ : ಗಾಝಾ ಆಸ್ಪತ್ರೆಯ ಮೇಲಿನ ದಾಳಿ ಇಸ್ರೇಲ್ ಮಾಡಿದ್ದಲ್ಲ, ಅದು ಬೇರೆ ತಂಡದ ಕೃತ್ಯ ಎಂದು ಇಸ್ರೇಲ್ ಹೇಳಿಕೆಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಬೆಂಬಲ ಸೂಚಿಸಿದ್ದಾರೆ.
ಬುಧವಾರ, ಗಾಝಾ ಆಸ್ಪತ್ರೆಯೆ ಮೇಲಿನ ದಾಳಿಯ ಬಳಿ ಅಮೇರಿಕಾ ಅಧ್ಯಕ್ಷರ ಜೊತೆ ಮಧ್ಯಪ್ರಾಚ್ಯ ರಾಷ್ಟ್ರಗಳು ಜೋರ್ಡನ್ ಆಯೋಜಿಸಿದ್ದ ಶೃಂಗ ಸಭೆ ರದ್ದುಗೊಳಿಸಿದ ಬಳಿಕ, ನೇರವಾಗಿ ಇಸ್ರೇಲ್ ಗೆ ಆಗಮಿಸಿದ ಅಧ್ಯಕ್ಷ ಬೈಡನ್ ಈ ಹೇಳಿಕೆ ನೀಡಿದ್ದಾರೆ. ಫೆಲಸ್ತೀನಿನ ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೇಲಿನ ವೈಮಾನಿಕ ದಾಳಿಯ ಬಳಿಕ, ಗಾಝಾ ಪಟ್ಟಿಯ ವಿಚಾರವಾಗಿ ಇಸ್ರೇಲ್ – ಫೆಲಸ್ತೀನ್ ನಡುವೆ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ರಾಜತಾಂತ್ರಿಕ ಭೇಟಿಗೆ ಆಗಮಿಸಿದ್ದಾರೆ.
ವಿಶೇಷ ವಿಮಾನದಲ್ಲಿ ಟೆಲ್ ಅವೀವ್ ಗೆ ಆಗಮಿಸಿದ ಬೈಡನ್, ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರೊಡನೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ನಿನ್ನೆ ಗಾಜಾದಲ್ಲಿ ಆಸ್ಪತ್ರೆಯ ಸ್ಫೋಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ದಾಳಿಯ ಬಗ್ಗೆ ನನಗೆ ಆಕ್ರೋಶವಿದೆ. ನಾನು ಗಮನಿಸಿದಂತೆ ಇದು ಬೇರೆ ತಂಡ ಮಾಡಿರುವ ಕೃತ್ಯ. ದಾಳಿಯಲ್ಲಿ ಇಸ್ರೇಲ್ ನ ಪಾತ್ರವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
“ಇಸ್ರೇಲ್ಗೆ ಅಮೇರಿಕಾ ಮತ್ತು ಇತರ ಪ್ರಜಾಪ್ರಭುತ್ವಗಳ ದೇಶಗಳಂತೆಯೇ ಮೌಲ್ಯಗಳಿವೆ. ಜಗತ್ತೇ ಇಸ್ರೇಲ್ ಏನು ಮಾಡಲಿದೆ ಎಂದು ನೋಡುತ್ತಿದೆ” ಎಂದರು.
“ಗುರಿ ತಪ್ಪಿದ ರಾಕೆಟ್ ಉಡಾವಣೆ ಆಸ್ಪತ್ರೆಯ ಹತ್ಯಾಕಾಂಡಕ್ಕೆ ಕಾರಣವಾಯಿತು” ಎಂದು ಪ್ರತಿಪಾದಿಸುವ ಮೂಲಕ, ಬಿಡೆನ್ ಇಸ್ರೇಲ್ ನ ಕಾರ್ಯಾಚರಣೆಗೆ ಪರೋಕ್ಷ ಬೆಂಬಲ ನೀಡಿದ್ದಾರೆ.