ನೇಟೊ ಕುರಿತ ಟ್ರಂಪ್ ಹೇಳಿಕೆಗೆ ಬೈಡನ್, ಇಯು ಮುಖಂಡರ ಖಂಡನೆ
ಜೋ ಬೈಡನ್ Photo:NDTV
ವಾಷಿಂಗ್ಟನ್: ರಶ್ಯದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಅಗತ್ಯವಿರುವ ರಕ್ಷಣಾ ಸಾಮರ್ಥ್ಯಗಳಿಗೆ ವೆಚ್ಚ ಮಾಡಲು ಸಿದ್ಧವಿಲ್ಲದ ನೇಟೊ ಸದಸ್ಯ ದೇಶಗಳ ರಕ್ಷಣೆಗೆ ಅಮೆರಿಕ ಮುಂದಾಗಬಾರದು ಎಂಬ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ನೇಟೊದ ಉನ್ನತ ಮುಖಂಡರು ಖಂಡಿಸಿದ್ದಾರೆ.
`ಜಾಗತಿಕ ವೇದಿಕೆಯಲ್ಲಿ ಅಮೆರಿಕದ ನಾಯಕತ್ವ ಮತ್ತು ನಮ್ಮ ಮಿತ್ರರಿಗೆ ನೆರವು ಒದಗಿಸುವುದು ಸ್ವದೇಶದಲ್ಲಿ ಅಮೆರಿಕನ್ನರ ಸುರಕ್ಷತೆಗೆ ಅತ್ಯಂತ ನಿರ್ಣಾಯಕವಾಗಿದೆ' ಎಂದು ಬೈಡನ್ ಹೇಳಿದ್ದಾರೆ. `ಒಂದು ವೇಳೆ ನನ್ನ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅಧಿಕಾರವನ್ನು ಮರಳಿ ಪಡೆಯಲು ಸಾಧ್ಯವಾದರೆ, ರಶ್ಯದ ಆಕ್ರಮಣಕ್ಕೆ ಒಳಗಾಗುವ ನೇಟೊ ಮಿತ್ರದೇಶಗಳನ್ನು ಕೈಬಿಡುವುದು ಸ್ಪಷ್ಟವಾಗಿದೆ. ನೀವು ಏನು ಬೇಕಾದರೂ ಮಾಡಿ ಎಂದು ಅವರು ರಶ್ಯಕ್ಕೆ ಮುಕ್ತ ಅವಕಾಶ ಒದಗಿಸುತ್ತಾರೆ' ಎಂದು ಬೈಡನ್ ಟೀಕಿಸಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಾಜಕೀಯ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್ `ನೇಟೊ ಮುಖಂಡರ ಜತೆ ಈ ಹಿಂದೊಮ್ಮೆ ನಡೆಸಿದ್ದ ಸಭೆ ನೆನಪಿಗೆ ಬರುತ್ತಿದೆ. ಸಭೆಯಲ್ಲಿ ಹಾಜರಿದ್ದ ದೊಡ್ಡ ದೇಶವೊಂದರ ಅಧ್ಯಕ್ಷರು -ಒಂದು ವೇಳೆ ನಾವು ರಕ್ಷಣಾ ವೆಚ್ಚಗಳಿಗೆ ಹಣ ನೀಡದಿದ್ದರೆ, ರಶ್ಯದ ಆಕ್ರಮಣದ ಸಂದರ್ಭ ನಮ್ಮ ರಕ್ಷಣೆಗೆ ನಿಲ್ಲುತ್ತೀರಾ ? ಎಂದು ನನ್ನನ್ನು ಕೇಳಿದ್ದರು. ನೀವು ಹಣ ಪಾವತಿಸದಿದ್ದರ ನಾವೇಕೆ ನಿಮ್ಮ ರಕ್ಷಣೆಗೆ ಬರಬೇಕು ಎಂದು ನಾನು ಪ್ರಶ್ನಿಸಿದ್ದೆ' ಎಂದು ಹೇಳಿದ್ದರು. ನೇಟೊದ 31 ಸದಸ್ಯ ದೇಶಗಳು ಪ್ರತೀ ವರ್ಷ ತಮ್ಮ ಜಿಡಿಪಿಯ ಕನಿಷ್ಟ 2% ಮೊತ್ತವನ್ನು ರಕ್ಷಣಾ ವೆಚ್ಚಕ್ಕೆ ನೀಡುವ ಒಪ್ಪಂದವಿದೆ. ಆದರೆ ನೇಟೊದ ವರದಿ ಪ್ರಕಾರ ಕೇವಲ 11 ದೇಶಗಳು ಮಾತ್ರ ಇಷ್ಟು ಮೊತ್ತವನ್ನು ದೇಣಿಗೆ ನೀಡುತ್ತಿವೆ ಎಂದು ಟ್ರಂಪ್ ಹೇಳಿದ್ದರು.
ಟ್ರಂಪ್ ಹೇಳಿಕೆಯನ್ನು ಖಂಡಿಸಿರುವ ನೇಟೊದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್ `ಮಿತ್ರದೇಶಗಳು ಪರಸ್ಪರ ರಕ್ಷಣೆಗೆ ಮುಂದಾಗಬಾರದು ಎಂಬ ಯಾವುದೇ ಆಲೋಚನೆ ಅಮೆರಿಕ ಸೇರಿದಂತೆ ನಮ್ಮ ಎಲ್ಲಾ ಸದಸ್ಯರ ಭದ್ರತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅಮೆರಿಕ ಹಾಗೂ ಯುರೋಪ್ ಯೋಧರನ್ನು ಅಧಿಕ ಅಪಾಯಕ್ಕೆ ದೂಡುತ್ತದೆ' ಎಂದಿದ್ದಾರೆ.
`ಎಲ್ಲರಿಗೂ ಒಂದು ಮತ್ತು ಎಲ್ಲರಿಗಾಗಿ ಒಂದು' ಎಂಬುದು ನೇಟೊದ ಧ್ಯೇಯವಾಕ್ಯವಾಗಿದೆ ಮತ್ತು ಇದಕ್ಕೆ ನಾವೆಲ್ಲಾ ಬದ್ಧವಾಗಿದ್ದೇವೆ. ನೇಟೊದ ಮೇಲಿನ ಯಾವುದೇ ಆಕ್ರಮಣವನ್ನು ಒಗ್ಗಟ್ಟಿನಿಂದ ಮತ್ತು ಬಲವಾಗಿ ಎದುರಿಸಲಾಗುತ್ತದೆ. ಮಿತ್ರದೇಶಗಳ ವಿಶ್ವಾಸಾರ್ಹತೆಯನ್ನು ಕಡೆಗಣಿಸುವುದು ಸಂಪೂರ್ಣ ನೇಟೊವನ್ನು ದುರ್ಬಲಗೊಳಿಸಿದಂತಾಗುತ್ತದೆ' ಎಂದು ಸ್ಟಾಲ್ಟನ್ಬರ್ಗ್ ಹೇಳಿದ್ದಾರೆ. `ಯಾವುದೇ ಚುನಾವಣೆ ಪ್ರಚಾರವೂ ನಮ್ಮ ಮೈತ್ರಿಕೂಟದ ಭದ್ರತೆಯೊಂದಿಗೆ ಆಟವಾಡಲು ಅವಕಾಶವಿಲ್ಲ' ಎಂದು ಜರ್ಮನಿಯ ವಿದೇಶಾಂಗ ಇಲಾಖೆ ಹೇಳಿದೆ.