ಚೀನಾದ ವಿರೋಧದ ನಡುವೆಯೇ `ಟಿಬೆಟ್ ಬಿಕ್ಕಟ್ಟು ಪರಿಹಾರ' ಕಾಯ್ದೆಗೆ ಬೈಡನ್ ಸಹಿ
ಜೋ ಬೈಡನ್ | PC : PTI
ವಾಷಿಂಗ್ಟನ್ : ಟಿಬೆಟ್ಗೆ ಅಮೆರಿಕದ ಬೆಂಬಲವನ್ನು ಹೆಚ್ಚಿಸುವ ಮತ್ತು ಟಿಬೆಟ್ನ ಸ್ಥಿತಿ ಹಾಗೂ ಆಡಳಿತದ ಮೇಲಿನ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಚೀನಾ ಮತ್ತು ದಲಾಯ್ ಲಾಮಾ ನಡುವೆ ಮಾತುಕತೆಯನ್ನು ಉತ್ತೇಜಿಸುವ ವಿನ ಮಸೂದೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ್ದಾರೆ.
`ಟಿಬೆಟ್ ಬಿಕ್ಕಟ್ಟು ಪರಿಹಾರ' ಕಾಯ್ದೆಯು ಅಸ್ಥಿರಗೊಳಿಸುವ ಕಾಯ್ದೆ ಎಂದು ಚೀನಾ ವಿರೋಧಿಸಿದೆ. ಕಳೆದ ಫೆಬ್ರವರಿಯಲ್ಲಿ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ನಲ್ಲಿ (ಸಂಸತ್ನ ಕೆಳಮನೆ)ಯಲ್ಲಿ ಅನುಮೋದನೆಗೊಂಡಿದ್ದ ಮಸೂದೆಯನ್ನು ಮೇ ತಿಂಗಳಿನಲ್ಲಿ ಸೆನೆಟ್ ಕೂಡಾ ಅನುಮೋದಿಸಿತ್ತು. ಇದೀಗ ಮಸೂದೆಗೆ ಅಧ್ಯಕ್ಷರು ಸಹಿ ಹಾಕುವ ಮೂಲಕ ಅದು ಕಾಯ್ದೆಯ ರೂಪ ಪಡೆದಿದೆ.
ಟಿಬೆಟ್-ಚೀನಾ ವಿವಾದಕ್ಕೆ ಪರಿಹಾರವನ್ನು ಪ್ರೋತ್ಸಾಹಿಸುವ ಮಸೂದೆಯನ್ನು ಎಲ್ಲಾ ಸಂಸದರೂ ಪಕ್ಷಬೇಧ ಮರೆತು ಬೆಂಬಲಿಸಿದ್ದಾರೆ. ಟಿಬೆಟಿಯನ್ನರ ಮಾನವ ಹಕ್ಕುಗಳನ್ನು ಮುನ್ನಡೆಸಲು ಮತ್ತು ಅವರ ವಿಶಿಷ್ಟ ಭಾಷೆ, ಸಂಸ್ಕøತಿ ಮತ್ತು ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸುವ ಬೆಂಬಲಿಸುವ ಸಂಸತ್ನ ಬದ್ಧತೆಯನ್ನು ಶ್ಲಾಘಿಸುತ್ತೇನೆ' ಎಂದು ಬೈಡನ್ ಹೇಳಿದ್ದಾರೆ.
ಯಾವುದೇ ಪೂರ್ವ ಷರತ್ತುಗಳಿಲ್ಲದೆ ದಲಾಯ್ ಲಾಮಾ ಅಥವಾ ಅವರ ಪ್ರತಿನಿಧಿಗಳೊಂದಿಗೆ ನೇರ ಸಂವಾದವನ್ನು ಪುನರಾರಂಭಿಸುವಂತೆ, ಭಿನ್ನಾಭಿಪ್ರಾಯಗಳನ್ನು ದೂರಗೊಳಿಸಿ ಟಿಬೆಟ್ನ ಬಗ್ಗೆ ಒಪ್ಪಂದಕ್ಕೆ ಕಾರಣವಾಗುವ ಮಾತುಕತೆ ನಡೆಸುವಂತೆ ಚೀನಾ ಸರಕಾರವನ್ನು ಆಗ್ರಹಿಸುವುದನ್ನು ಅಮೆರಿಕ ಮುಂದುವರಿಸಲಿದೆ ಎಂದು ಬೈಡನ್ ಹೇಳಿದ್ದಾರೆ.
ಟಿಬೆಟ್ ಸ್ವಾಯತ್ತ ಪ್ರಾಂತ ಮತ್ತು ಇತರ ಟಿಬೆಟ್ ಪ್ರದೇಶಗಳು `ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ'ದ ಭಾಗವೆಂಬ ಅಮೆರಿಕದ ದೀರ್ಘಾವಧಿಯ ನೀತಿಯನ್ನು ಈ ಕಾಯ್ದೆಯು ಬದಲಾಯಿಸುವುದಿಲ್ಲ. ಆದರೆ ಟಿಬೆಟ್ಗೆ ಅಮೆರಿಕದ ಬೆಂಬಲವನ್ನು ಹೆಚ್ಚಿಸುತ್ತದೆ ಮತ್ತು ಚೀನಾ ಸರಕಾರದಿಂದ ಟಿಬೆಟ್ ಬಗ್ಗೆ ತಪ್ಪು ಮಾಹಿತಿ ಪ್ರಸಾರವನ್ನು ಸಕ್ರಿಯವಾಗಿ ಮತ್ತು ನೇರವಾಗಿ ಎದುರಿಸಲು ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. `ಪುರಾತನ ಕಾಲ'ದಿಂದಲೂ ಟಿಬೆಟ್ ಚೀನಾದ ಭಾಗವಾಗಿತ್ತು ಎಂಬ ಸುಳ್ಳು ಪ್ರತಿಪಾದನೆಯನ್ನು ತಿರಸ್ಕರಿಸುತ್ತದೆ. ಚೀನಾ ಸರಕಾರ ಮತ್ತು ದಲಾಯಿ ಲಾಮಾ, ಅಥವಾ ಅವರ ಪ್ರತಿನಿಧಿ ಅಥವಾ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಗೊಂಡಿರುವ ಟಿಬೆಟಿಯನ್ ಸಮುದಾಯದ ಪ್ರತಿನಿಧಿ ನಡುವೆ ಪೂರ್ವ ಷರತ್ತುಗಳಿಲ್ಲದೆ ಮಾತುಕತೆಯನ್ನು ಆಗ್ರಹಿಸುತ್ತದೆ. ಟಿಬೆಟ್ನಲ್ಲಿ ಸಂಧಾನದ ಮೂಲಕ ಒಪ್ಪಂದದ ಗುರಿಯತ್ತ ಬಹುಪಕ್ಷೀಯ ಪ್ರಯತ್ನಗಳಲ್ಲಿ ಇತರ ದೇಶಗಳೊಂದಿಗೆ ಸಮನ್ವಯ ಸಾಧಿಸಲು ವಿದೇಶಾಂಗ ಇಲಾಖೆಯ ಜವಾಬ್ದಾರಿಯನ್ನು ದೃಢೀಕರಿಸಿದೆ.
ಮಸೂದೆಗೆ ಬೈಡನ್ ಸಹಿ ಹಾಕಬಾರದು ಎಂದು ಜೂನ್ನಲ್ಲಿ ಚೀನಾ ಆಗ್ರಹಿಸಿತ್ತು. `ಕ್ಸಿಜಾಂಗ್ (ಟಿಬೆಟ್ ಸ್ವಾಯತ್ತ ಪ್ರದೇಶ) ಅನ್ನು ಅಸ್ಥಿರಗೊಳಿಸುವ ಅಥವಾ ಚೀನಾವನ್ನು ನಿಗ್ರಹಿಸುವ, ಒತ್ತಡ ಹೇರುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ. ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಲು ಚೀನಾ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ' ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯಿಸಿದ್ದಾರೆ.
ದೇಶಭ್ರಷ್ಟ ಸರಕಾರ
1959ರಲ್ಲಿ ಟಿಬೆಟ್ನಿಂದ ಪಲಾಯನ ಮಾಡಿದ 14ನೇ ದಲಾಯಿ ಲಾಮಾ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದೇಶಭ್ರಷ್ಟ ಸರಕಾರವನ್ನು ಸ್ಥಾಪಿಸಿದರು. 2002ರಿಂದ 2010ರವರೆಗೆ ಲಾಮಾ ಅವರ ಪ್ರತಿನಿಧಿಗಳು ಮತ್ತು ಚೀನಾ ಸರಕಾರದ ನಡುವೆ ನಡೆದ 9 ಸುತ್ತುಗಳ ಮಾತುಕತೆ ಯಾವುದೇ ಪರಿಹಾರ ಸೂತ್ರ ಸಾಧಿಸಲು ವಿಫಲವಾಗಿತ್ತು.
ಭಾರತದಲ್ಲಿ ನೆಲೆಸಿರುವ 89 ವರ್ಷದ ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ ಲಾಮಾ ಟಿಬೆಟನ್ನು ಚೀನಾದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿರುವ `ಪ್ರತ್ಯೇಕತಾವಾದಿ' ಎಂದು ಚೀನಾ ಪ್ರತಿಪಾದಿಸುತ್ತಿದೆ.