ಗಾಝಾಕ್ಕೆ ಮಾನವೀಯ ನೆರವು ಪೂರೈಕೆಗೆ ಅಮೆರಿಕ ಬೆಂಬಲ
ಫೆಲೆಸ್ತೀನ್ ಅಧ್ಯಕ್ಷರ ಜತೆ ಬೈಡನ್ ಚರ್ಚೆ
ಜೋ ಬೈಡನ್ (Photo: AFP/PTI)
ವಾಷಿಂಗ್ಟನ್ : ಗಾಝಾ ಪ್ರದೇಶಕ್ಕೆ ಮಾನವೀಯ ನೆರವು ಪೂರೈಸುವ ಮತ್ತು ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳಿಗೆ ಬೆಂಬಲವನ್ನು ಪುನರುಚ್ಚರಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಈ ನಿಟ್ಟಿನಲ್ಲಿ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಇಸ್ರೇಲ್ ಗೆ ಬೆಂಬಲವಾಗಿ ಎರಡನೇ ವಿಮಾನವಾಹಕ ಯುದ್ಧನೌಕೆಯನ್ನು ರವಾನಿಸುವುದಾಗಿ ಅಮೆರಿಕ ಹೇಳಿದೆ. ಇಸ್ರೇಲ್-ಹಮಾಸ್ ಸಂಘರ್ಷ ಇತರ ಪ್ರದೇಶಕ್ಕೆ ವಿಸ್ತರಿಸದಂತೆ ತಡೆಯುವ ಕ್ರಮವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮಧ್ಯಪ್ರಾಚ್ಯದಾದ್ಯಂತ ಬಿರುಸಿನ ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಪಶ್ಚಿಮ ದಂಡೆಯನ್ನು ನಿಯಂತ್ರಿಸುವ ಫೆಲೆಸ್ತೀನಿಯನ್ ಅಥಾರಿಟಿ(ಪಿಎ)ಯ ಅಧ್ಯಕ್ಷ ಅಬ್ಬಾಸ್ ಅಮೆರಿಕ ಅಧ್ಯಕ್ಷರಿಗೆ ಫೆಲೆಸ್ತೀನಿಯನ್ ಜನತೆಗೆ, ವಿಶೇಷವಾಗಿ ಗಾಝಾ ಪ್ರದೇಶಕ್ಕೆ ನೆರವು ಒದಗಿಸುವ ಪ್ರಯತ್ನಗಳ ಬಗ್ಗೆ ವಿವರಿಸಿದರು. ಗಾಝಾದಿಂದ ಫೆಲೆಸ್ತೀನೀಯರ ಸ್ಥಳಾಂತರಕ್ಕೆ ಇಸ್ರೇಲ್ ನೀಡಿರುವ ಎಚ್ಚರಿಕೆಯನ್ನು ಸಂಪೂರ್ಣ ತಿರಸ್ಕರಿಸುವುದಾಗಿ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ ಎಂದು ಫೆಲೆಸ್ತೀನ್ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬೈಡನ್ `ಹಮಾಸ್ ಫೆಲೆಸ್ತೀನೀಯರ ಘನತೆ ಹಾಗೂ ಸ್ವ-ನಿರ್ಣಯದ ಪ್ರತಿನಿಧಿಯಲ್ಲ' ಎಂದು ಹೇಳಿರುವುದಾಗಿ ಅಮೆರಿಕ ಸರಕಾರದ ಹೇಳಿಕೆ ತಿಳಿಸಿದೆ. ಇದೇ ವೇಳೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿದ ಬೈಡನ್ ` ಇಸ್ರೇಲ್ ಗೆ ಅಮೆರಿಕದ ಅಚಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಜತೆಗೆ, ಗಾಝಾದ ನಿವಾಸಿಗಳಿಗೆ ಆಹಾರ, ನೀರು ಮತ್ತು ವೈದ್ಯಕೀಯ ನೆರವು ಖಾತರಿಪಡಿಸಲು ನಡೆಯುತ್ತಿರುವ ಪ್ರಾದೇಶಿಕ ಪ್ರಯತ್ನಗಳನ್ನು ವಿವರಿಸಿದರು' ಎಂದು ಅಮೆರಿಕದ ಮೂಲಗಳು ಹೇಳಿವೆ.
ಈ ಮಧ್ಯೆ, ಸೌದಿ ಮತ್ತು ಯುಇಎ ಮುಖಂಡರನ್ನು ಭೇಟಿ ಮಾಡಿರುವ ಬ್ಲಿಂಕೆನ್ ಗಾಝಾವನ್ನು ತೊರೆಯಲು ಬಯಸುವ ಜನರಿಗೆ ಸುರಕ್ಷಿತ ಮಾರ್ಗದ ವ್ಯವಸ್ಥೆ ಮಾಡುವ ಅಗತ್ಯದ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಗೆ ಕರೆ ಮಾಡಿದ ಬ್ಲಿಂಕೆನ್ `ಯುದ್ಧವು ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸದಂತೆ ತಡೆಯಲು ಚೀನಾ ಮಧ್ಯಪ್ರಾಚ್ಯದಲ್ಲಿ ಹೊಂದಿರುವ ಪ್ರಭಾವವನ್ನು ಬಳಸುವಂತೆ' ಕರೆ ಮಾಡಿದರು. ಈ ಪ್ರದೇಶದ ಸ್ಥಿರತೆ ಚೀನಾದ ಹಿತಾಸಕ್ತಿಗೂ ಪೂರಕವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಅಮೆರಿಕದ ಉನ್ನತ ಮೂಲಗಳು ಹೇಳಿವೆ.