2ನೇ ಜಾಗತಿಕ ಸಮರದ ಬಳಿಕ ರಷ್ಯಾ ನೆಲದ ಮೇಲೆ ಅತಿದೊಡ್ಡ ದಾಳಿ: ಉಕ್ರೇನ್
PC: x.com/ABCPolitics
ಮಾಸ್ಕೊ: ರಷ್ಯನ್ ಪಡೆಗಳ ಮೇಲೆ ತೀವ್ರ ದಾಳಿ ನಡೆಸಿರುವ ಉಕ್ರೇನ್, 1,150 ಚದರ ಕಿಲೋಮೀಟರ್ ಭೂಮಿಯನ್ನು ಹಾಗೂ 82 ವಸಾಹತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ರಷ್ಯನ್ ಗಡಿಯಿಂದ ಕೇವಲ 8 ಕಿಲೋಮೀಟರ್ ದೂರದ ಸುದ್ಝಾ ಸೇರಿದಂತೆ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿರುವುದಾಗಿ ಉಕ್ರೇನ್ ಹೇಳಿದೆ. 2ನೇ ಜಾಗತಿಕ ಯುದ್ಧದ ಬಳಿಕ ವಿದೇಶಿ ಸೇನೆಯೊಂದು ನಡೆಸಿದ ಅತಿದೊಡ್ಡ ಆಕ್ರಮಣ ಇದಾಗಿದೆ.
"ನಾವು 1150 ಚದರ ಕಿಲೋಮೀಟರ್ ಭೂಭಾಗವನ್ನು ಮತ್ತು 82 ವಸಾಹತುಗಳನ್ನು ನಿಯಂತ್ರಣಕ್ಕೆ ಪಡೆದಿದ್ದೇವೆ" ಎಂದು ಪ್ರಮುಖ ಮಿಲಿಟರಿ ಕಮಾಂಡರ್ ಅಲೆಗ್ಸಾಂಡರ್ ಸೈರಿಸ್ಕಿ ಹೇಳಿದ್ದಾರೆ.
ರಷ್ಯಾದ ಅತಿಕ್ರಮಣ ವಿರುದ್ಧ ಎರಡು ವರ್ಷಗಳಿಂದ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಪುಟ್ಟ ರಾಷ್ಟ್ರ ಆಗಸ್ಟ್ 6ರಿಂದ ರಷ್ಯಾ ವಿರುದ್ಧ ಪ್ರತಿದಾಳಿ ನಡೆಸುತ್ತಿದೆ. ಇದು ಉಭಯ ದೇಶಗಳ ನಡುವಿನ ಸಂಘರ್ಷ ಉಲ್ಬಣಕ್ಕೆ ಕಾರಣವಾಗಿದೆ. ಸುದ್ಝಾ ವಿಮೋಚನೆಯನ್ನು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಧೃಢಪಡಿಸಿದ್ದು, ಸೇನೆಯ ಪ್ರಯತ್ನವನ್ನು ಕೊಂಡಾಡಿದ್ದಾರೆ. ರಷ್ಯಾ ಸೇನೆಯ ವಶದಿಂದ ಸುದ್ಝಾ ಪಟ್ಟಣವನ್ನು ವಿಮೋಚನೆಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ವಿವರಿಸಿದ್ದಾರೆ.