ಪಾಕಿಸ್ತಾನ: ಪ್ರಧಾನಿ ಗಾದಿ ರೇಸ್ ನಿಂದ ಹಿಂದೆ ಸರಿದ ಬಿಲಾವಲ್ ಭುಟ್ಟೊ
fb.com/BilawalBhuttoZardariPk
ಇಸ್ಲಾಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಬಳಿಕ ಅತಂತ್ರ ಸಂಸತ್ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಇದೀಗ ತಿಳಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮಿತ್ರಪಕ್ಷಗಳು ಜತೆ ಸೇರಿ ಸರ್ಕಾರ ರಚನೆ ಬಗ್ಗೆ ಔಪಚಾರಿಕ ಮಾತುಕತೆ ಆರಂಭಿಸಿವೆ.
ಫೆಬ್ರವರಿ 8ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಕೂಡಾ ಬಾರದ ಹಿನ್ನೆಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಾಕಿಸ್ತಾನದ ಎರಡು ದೊಡ್ಡ ಪಕ್ಷಗಳ ನಡುವೆ ಪಿಎಂ ಗಾದಿಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಬೆಂಬಲಿತ ಪಕ್ಷೇತರರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಬಹುಮತ ಸಾಧಿಸಲು ಎರಡು ಪಕ್ಷಗಳು ಜತೆಯಾಗುವುದು ಅನಿವಾರ್ಯವಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ ಜರ್ಜರಿತವಾಗಿರುವ ಪಾಕಿಸ್ತಾನದ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ.
ದೇಶದ ಅತ್ಯುನ್ನತ ಹುದ್ದೆಗೆ ಪಟ್ಟು ಹಿಡಿದಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡ ಬಿಲಾವಲ್ ಭುಟ್ಟೊ ಝರ್ದಾರಿ, ಪ್ರಧಾನಿ ಸ್ಥಾನದ ರೇಸ್ ನಿಂದ ಹಿಂದೆ ಸರಿದಿದ್ದು, ನವಾಝ್ ಷರೀಫ್ ಅವರ ಹಾದಿ ಸುಗಮವಾದಂತಾಗಿದೆ. ಸಮ್ಮಿಶ್ರ ಸರ್ಕಾರ ರಚನೆಗೆ ತಾವು ಬದ್ಧ ಎಂದು ಸಹ ಅಧ್ಯಕ್ಷ ಆಸೀಫ್ ಅಲಿ ಝರ್ದಾರಿ ಘೋಷಿಸಿದ್ದಾರೆ.
ದೇಶದ ಸಾಲ ಮತ್ತು ಇತರ ಸಮಸ್ಯೆಗಳ ಬಗ್ಗೆ ರಾಜಕೀಯ ನಾಯಕರು ಜಾಗೃತಿ ಹೊಂದುವುದು ಅಗತ್ಯ. ಚುನಾವಣೆಗೆ ಮುನ್ನ ವಿರೋಧ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಇದ್ದುದು ಪ್ರಚಾರದ ಬಗ್ಗೆಯೇ ಹೊರತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಲ್ಲ. ಮುಖಂಡರು ಒಂದಾಗಿ ಚರ್ಚೆ ನಡೆಸಿ ದೇಶವನ್ನು ಸಂಘಟಿತವಾಗಿ ಆಳ್ವಿಕೆ ಮಾಡೋಣ ಎಂದು ಅವರು ಸಲಹೆ ಮಾಡಿದ್ದಾರೆ.