ಮಿಜೋರಾಂನಿಂದ ಮ್ಯಾನ್ಮಾರ್ ಪ್ರಜೆಗಳ ಬಯೋಮೆಟ್ರಿಕ್ ವಿವರ ಸಂಗ್ರಹ ಆರಂಭ
Photo: PTI
ಐಜ್ವಾಲ್: ಕೇಂದ್ರ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಮಿಜೋರಾಂ ಸರಕಾರ ಮ್ಯಾನ್ಮಾರ್ ಪ್ರಜೆಗಳ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿದೆ. ಮ್ಯಾನ್ಮಾರ್ ಮಿಲಿಟರಿ ಜುಂಟ ಮ್ಯಾನ್ಮಾರ್ನರಲ್ಲಿ ದಂಗೆ ನಡೆಸಿದ ಬಳಿಕ 2021 ಫೆಬ್ರವರಿಯಿಂದ ಮಿಜೋರಾಂನಲ್ಲಿ 30 ಸಾವಿರಕ್ಕೂ ಅಧಿಕ ಮ್ಯಾನ್ಮಾರ್ ಪ್ರಜೆಗಳು ಆಶ್ರಯ ಪಡೆದುಕೊಂಡಿದ್ದಾರೆ.
ಮ್ಯಾನ್ಮಾರ್ ಪ್ರಜೆಗಳ ಬಯೋಮೆಟ್ರಿಕ್ ದತ್ತಾಂಶವನ್ನು ದಾಖಸುವ ಪ್ರಾಯೋಗಿಕ ಯೋಜನೆಯನ್ನು ಎಲ್ಲ 11 ಜಿಲ್ಲೆಗಳಲ್ಲಿ ಕಳೆದ ವಾರ ಆರಂಭಿಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆಯ ಅಧಿಕಾರಿ (ವಿಶೇಷ ಕರ್ತವ್ಯ ಹಾಗೂ ಜಂಟಿ ಕಾರ್ಯದರ್ಶಿ) ಡೇವಿಡ್ ಎಚ್. ಲತಾಂಗ್ಲಿಯಾನ ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಪರಿಹಾರ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಕ್ರಮ ವಲಸಿಗರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವಂತೆ ಮಿಜೋರಾಂ ಹಾಗೂ ಮಣಿಪುರಕ್ಕೆ ಕೇಂದ್ರ ಗೃಹ ಸಚಿವಾಲಯ ಎಪ್ರಿಲ್ ನಲ್ಲಿ ಸೂಚಿಸಿತ್ತು. ಸೆಪ್ಟಂಬರ್ 30ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಚಿವಾಲಯ ಜೂನ್ನಲ್ಲಿ ಎರಡೂ ರಾಜ್ಯಗಳಿಗೆ ನೆನಪಿಸಿತ್ತು.
ಮ್ಯಾನ್ಮಾರ್ ಪ್ರಜೆಗಳನ್ನು ಗಡಿಪಾರು ಮಾಡಬೇಕೆಂಬ ಕೇಂದ್ರದ ಸೂಚನೆಗೆ ಮಿಜೋರಾಂ ಮುಖ್ಯಮಂತ್ರಿ ಝೊರಾಮ್ತಂಗ ಅವರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದೇ ಜನಾಂಗಕ್ಕೆ ಸೇರಿರುವುದರಿಂದ ಅವರನ್ನು ಮತ್ತೆ ಮ್ಯಾನ್ಮಾರ್ಗೆ ಕಳುಹಿಸಲು ಸಾಧ್ಯವಿಲ್ಲ. ಅಲ್ಲದೆ, ನಾವು ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದ್ದೇವೆ ಎಂದು ಝೊರಾಮ್ತಂಗ ಅವರು ಹೇಳಿದ್ದರು. ಹೆಚ್ಚಿನ ಮ್ಯಾನ್ಮಾರ್ ಪ್ರಜೆಗಳು ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿ, ಇತರರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮ್ಯಾನ್ಮಾರ್ ಪ್ರಜೆಗಳಿಗೆ ಸರಕಾರ, ಎನ್ಜಿಒ, ಚರ್ಚ್ ಹಾಗೂ ಗ್ರಾಮಸ್ಥರು ಆಹಾರ ನೀಡುತ್ತಿದ್ದಾರೆ.