ಹಕ್ಕಿಜ್ವರ: ಫ್ರಾನ್ಸ್ ನಲ್ಲಿ ಬಾತುಕೋಳಿಗಳಿಗೆ ಲಸಿಕಾ ಅಭಿಯಾನ
ಸಾಂದರ್ಭಿಕ ಚಿತ್ರ
ಪ್ಯಾರಿಸ್ : ಹಕ್ಕಿಜ್ವರದಿಂದ ಲಕ್ಷಾಂತರ ಹಕ್ಕಿಗಳ ಮಾರಣಹೋಮವನ್ನು ತಪ್ಪಿಸಲು ಫ್ರಾನ್ಸ್ ನಲ್ಲಿ ಬಾತುಕೋಳಿಗಳಿಗೆ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ ಎಂದು ವರದಿಯಾಗಿದೆ.
ಮುಂದಿನ ಬೇಸಿಗೆಗೂ ಮುನ್ನ ಸುಮಾರು 60 ದಶಲಕ್ಷ ಬಾತುಕೋಳಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ವೈರಸ್ ನ ಒತ್ತಡ ಹೆಚ್ಚಿದ್ದು ತೀವ್ರವಾಗಿ ಹರಡುವ ಸಾಧ್ಯತೆಯಿದೆ. 250 ಮತ್ತು ಅದಕ್ಕಿಂತ ಅಧಿಕ ಹಕ್ಕಿಗಳನ್ನು(ಕೋಳಿ, ಬಾತುಕೋಳಿ ಇತ್ಯಾದಿ) ಹೊಂದಿರುವ ಫಾರ್ಮ್ನಲ್ಲಿ ಅಕ್ಟೋಬರ್ ನಿಂದ ಲಸಿಕೆ ಹಾಕುವುದು ಕಡ್ಡಾಯವಾಗಿದ್ದು 10 ದಿನಗಳ ಮರಿಗೂ ಲಸಿಕೆಯ 2 ಡೋಸ್ ಕಡ್ಡಾಯ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫ್ರಾನ್ಸ್ನ ಕೋಳಿ ಫಾರ್ಮ್ ಗಳಲ್ಲಿ 2015-17ರ ಅವಧಿಯಲ್ಲಿ ಹಕ್ಕಿಜ್ವರದ ಅಲೆ ಕಂಡುಬಂದಿತ್ತು ಮತ್ತು 2020ರಿಂದ ಬಹುತೇಕ ನಿರಂತರ ಉಲ್ಬಣಿಸುತ್ತಿದೆ. ಒಂದು ಫಾರ್ಮ್ನಲ್ಲಿ ಹಕ್ಕಿಜ್ವರದ ಪ್ರಕರಣ ವರದಿಯಾದರೆ ಆ ಫಾರ್ಮ್ನಲ್ಲಿರುವ ಎಲ್ಲಾ ಕೋಳಿಗಳ ಸಾಮೂಹಿಕ ಹತ್ಯೆ ನಡೆಸುವುದರಿಂದ ದೀರ್ಘಾವಧಿಯಲ್ಲಿ ಕೋಳಿಮಾಂಸದ ಉತ್ಪಾದನೆಗೆ ತೊಡಕಾಗುವ ಜತೆಗೆ ರೈತರಿಗೆ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿತ್ತು. ಆದರೆ ಬಾತುಕೋಳಿಗಳಿಗೆ ಲಸಿಕೆ ಹಾಕುವುದು ಕೋಳಿಗಳ ಸಮುದಾಯದಲ್ಲಿ ಹಕ್ಕಿಜ್ವರವನ್ನು ಮರೆಮಾಚಬಹುದು ಎಂಬ ಆತಂಕ ರಫ್ತು ಮಾರುಕಟ್ಟೆಯಲ್ಲಿದೆ. ಫ್ರಾನ್ಸ್ ನಲ್ಲಿ ಲಸಿಕಾ ಅಭಿಯಾನ ಆರಂಭವಾದ ಬಳಿಕ ಆ ದೇಶದಿಂದ ಕೋಳಿ ಉತ್ಪನ್ನಗಳ ಆಮದನ್ನು ನಿಷೇಧಿಸಲಾಗುವುದು ಎಂದು ಜಪಾನ್ನ ಕೃಷಿ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.