ಅಮೆರಿಕ ಪೊಲೀಸರಿಂದ ಕಪ್ಪುವರ್ಣೀಯ ವ್ಯಕ್ತಿಯ ಹತ್ಯೆ : ವರದಿ
PC : X/@Tr00peRR
ವಾಷಿಂಗ್ಟನ್: ನಾಲ್ಕು ವರ್ಷದ ಹಿಂದೆ ಅಮೆರಿಕದ ಮಿನೆಪೊಲಿಸ್ನಲ್ಲಿ ಕಪ್ಪುವರ್ಣೀಯ ಜಾರ್ಜ್ಫ್ಲಾಯ್ಡ್ನನ್ನು ಪೊಲೀಸರು ಹತ್ಯೆ ಮಾಡಿದ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣದ ವೀಡಿಯೊವನ್ನು ಅಮೆರಿಕದ ಕ್ಯಾಂಟನ್ ನಗರದ ಪೊಲೀಸ್ ಇಲಾಖೆ ಬಿಡುಡಗೆಗೊಳಿಸಿದೆ.
ಅಮೆರಿಕದ ಕ್ಯಾಂಟನ್ ನಗರದಲ್ಲಿ ಅಪಘಾತ ಪ್ರಕರಣವೊಂದರ ಶಂಕಿತ ಆರೋಪಿಯನ್ನು ಬಂಧಿಸುವ ಸಂದರ್ಭ ಪೊಲೀಸರು ಆತನನ್ನು ನೆಲಕ್ಕೆ ಒತ್ತಿಹಿಡಿದಿದ್ದು ಉಸಿರಾಡಲು ಕಷ್ಟವಾಗುತ್ತಿದೆ ಎಂದು ಆರೋಪಿ ಚೀರುತ್ತಿದ್ದರೂ ಪೊಲೀಸರು ಕಿವಿಗೊಟ್ಟಿಲ್ಲ. ಪರಿಣಾಮ ಆರೋಪಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಪೊಲೀಸರ ಹೆಲ್ಮೆಟ್ನಲ್ಲಿ ಇರುವ ಸಿಸಿ ಕ್ಯಾಮೆರಾದಲ್ಲಿ ಈ ದುರಂತದ ವಿಡಿಯೋ ಸೆರೆಯಾಗಿದೆ.
ಕ್ಯಾಂಟನ್ ನಗರದಲ್ಲಿ ವಿದ್ಯುತ್ ಕಂಬವೊಂದಕ್ಕೆ ಕಾರು ಡಿಕ್ಕಿಯಾಗಿದ್ದು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಕಾರನ್ನು ಬೆನ್ನಟ್ಟಿದ ಪೊಲೀಸರು ಅಪಾರ್ಟ್ಮೆಂಟ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಪತ್ತೆಹಚ್ಚಿದ್ದು ಅಲ್ಲೇ ಬಳಿಯಿದ್ದ 53 ವರ್ಷದ ಫ್ರಾಂಕ್ ಟೈಸನ್ ಎಂಬಾತನನ್ನು ಬಂಧಿಸಲು ಮುಂದಾಗಿದ್ದಾರೆ. ಆತ ವಿರೋಧಿಸಿದಾಗ ಆತನ ಕೈಯನ್ನು ಹಿಂದಕ್ಕೆ ಕಟ್ಟಿ ನೆಲಕ್ಕೆ ಒತ್ತಿಹಿಡಿದಿದ್ದಾರೆ. ಉಸಿರಾಡಲು ಆಗುತ್ತಿಲ್ಲ ಎಂದು ಚೀರಿದರೂ ಕಿವಿಗೊಡದೆ ನೆಲಕ್ಕೆ ಒತ್ತಿಹಿಡಿದಿದ್ದರಿಂದ ಟೈಸನ್ ಅಸ್ವಸ್ಥಗೊಂಡಿದ್ದು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪ್ರಕರಣದಲ್ಲಿ ಒಳಗೊಂಡಿರುವ ಪೊಲೀಸರನ್ನು ಬ್ಯೂ ಸ್ಕೋನೆಗ್ಗೆ ಮತ್ತು ಕ್ಯಾಮ್ಡೆನ್ ಬರ್ಚ್ ಎಂದು ಗುರುತಿಸಲಾಗಿದ್ದು ಅವರನ್ನು ಆಡಳಿತಾತ್ಮಕ ರಜೆಯ ಮೇಲೆ ಕಳುಹಿಸಲಾಗಿದ್ದು ಕ್ರಿಮಿನಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಕ್ಯಾಂಟನ್ ಪೊಲೀಸ್ ಇಲಾಖೆ ಹೇಳಿದೆ.