ಗಾಝಾ ಕದನ ವಿರಾಮಕ್ಕೆ ಮುಂದುವರಿದ ಪ್ರಯತ್ನ: ಇಸ್ರೇಲ್ಗೆ ಬ್ಲಿಂಕೆನ್ ಭೇಟಿ
Photo: PTI
ಟೆಲ್ ಅವೀವ್ : ಗಾಝಾದಲ್ಲಿ 40,000ಕ್ಕೂ ಅಧಿಕ ಪೆಲೆಸ್ತೀನೀಯರ ಸಾವಿಗೆ ಕಾರಣವಾಗಿರುವ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕ ಪ್ರಯತ್ನ ಮುಂದುವರಿಸಿದ್ದು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ರವಿವಾರ ಇಸ್ರೇಲ್ಗೆ ಆಗಮಿಸಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ಎರಡಕ್ಕೂ ಸಮ್ಮತಿಯಾಗುವ ರೀತಿಯ ಕದನ ವಿರಾಮ ಪ್ರಸ್ತಾವನೆಯನ್ನು ಅಮೆರಿಕವು ಇತರ ಮಧ್ಯಸ್ಥಿಕೆದಾರರಾದ ಖತರ್ ಮತ್ತು ಈಜಿಪ್ಟ್ ಎದುರು ಮಂಡಿಸಿದ್ದು ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಬ್ಲಿಂಕೆನ್ ಇಸ್ರೇಲ್ ಜತೆ ಮಾತುಕತೆ ನಡೆಸಲು ಟೆಲ್ಅವೀವ್ಗೆ ಆಗಮಿಸಿದ್ದಾರೆ. ಕದನ ವಿರಾಮ ಮಾತುಕತೆ ಮುಂದಿನ ವಾರ ಈಜಿಪ್ಟ್ ನ ಕೈರೋದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ಈ ಮಧ್ಯೆ, ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಇಬ್ಬರು ಸಶಸ್ತ್ರ ಹೋರಾಟಗಾರರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಜೆನಿನ್ ನಗರದಲ್ಲಿ ಕಾರೊಂದನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಹಮಾಸ್ನ ಇಬ್ಬರು ಹೋರಾಟಗಾರರು ಹತರಾಗಿದ್ದಾರೆ. ಇವರು ಕಳೆದ ವಾರ ಪಶ್ಚಿಮದಂಡೆಯ ಜೋರ್ಡಾನ್ ಕಣಿವೆಯಲ್ಲಿ ಇಸ್ರೇಲಿ ಪ್ರಜೆಯೊಬ್ಬನ ಹತ್ಯೆಯ ಸಂಚು ರೂಪಿಸಿದ್ದರು ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.
ಇಸ್ರೇಲ್ ದಾಳಿಯಲ್ಲಿ ತನ್ನ ಇಬ್ಬರು ಹೋರಾಟಗಾರರು ಮೃತಪಟ್ಟಿರುವುದನ್ನು ಹಮಾಸ್ ದೃಢಪಡಿಸಿದೆ.
ಇಸ್ರೇಲ್ ದಾಳಿಯಲ್ಲಿ 19 ಮಂದಿ ಮೃತ್ಯು:
ಶನಿವಾರ ರಾತ್ರಿಯಿಂದ ಗಾಝಾದ್ಯಂತ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಮಹಿಳೆ ಮತ್ತು ಆಕೆಯ 6 ಮಕ್ಕಳ ಸಹಿತ ಕನಿಷ್ಠ 19 ಮಂದಿ ಮೃತಪಟ್ಟಿರುವುದಾಗಿ ಗಾಝಾ ಆರೋಗ್ಯ ಸಚಿವಾಲಯ ಹೇಳಿದೆ.
ರವಿವಾರ ಬೆಳಿಗ್ಗೆ ಡೀರ್ ಅಲ್-ಬಲಾಹ್ ನಗರದ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ಬಾಂಬ್ದಾಳಿಯಲ್ಲಿ ಮಹಿಳೆ ಮತ್ತು ಆಕೆಯ 6 ಮಕ್ಕಳು ಮೃತಪಟ್ಟಿರುವುದಾಗಿ ಅಲ್-ಅಕ್ಸಾ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಶಾಲಾ ಶಿಕ್ಷಕಿಯಾಗಿದ್ದ ಮಹಿಳೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಬಾಂಬ್ ದಾಳಿ ನಡೆದಿದ್ದು ಮಹಿಳೆ ಹಾಗೂ ಮಕ್ಕಳು ಮೃತಪಟ್ಟಿದ್ದರೆ, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿ ಹೇಳಿದೆ.
ಉತ್ತರದ ಜಬಾಲಿಯಾ ನಗರದಲ್ಲಿ ಎರಡು ಅಪಾರ್ಟ್ಮೆಂಟ್ಗಳನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ ತಾಯಿ- ಮಗಳು ಸಹಿತ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮಧ್ಯ ಗಾಝಾದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 4 ಮಂದಿ, ದಕ್ಷಿಣದ ಖಾನ್ ಯೂನಿಸ್ ನಗರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರ ಸಹಿತ ಒಂದೇ ಕುಟುಂಬದ 4 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.