ಕದನ ವಿರಾಮಕ್ಕೆ ಇದು ಕೊನೆಯ ಅವಕಾಶ, ಇದನ್ನು ಬಳಸಿಕೊಳ್ಳಿ: ಇಸ್ರೇಲ್ ಗೆ ಅಮೆರಿಕ ಸಲಹೆ
Photo : AI
ಟೆಲ್ಅವೀವ್ : ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಅಂತಿಮಗೊಳಿಸಲು ಬಹುಷಃ ಇದು ಕೊನೆಯ ಅವಕಾಶ ಆಗಿರಬಹುದು. ಕುಂಟ ನೆಪದ ಬದಲು ಪ್ರತಿಯೊಬ್ಬರೂ ಒಪ್ಪಂದಕ್ಕೆ ಹೌದು ಎಂದು ಹೇಳಬೇಕಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಇಸ್ರೇಲ್ ಗೆ ಸಲಹೆ ನೀಡಿದ್ದಾರೆ.
ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಮೇಲೆ ಒತ್ತಡ ಹೇರುವ ಸಲುವಾಗಿ ಇಸ್ರೇಲ್ ಗೆ ಆಗಮಿಸಿರುವ ಬ್ಲಿಂಕೆನ್ ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಜತೆ ಮಾತುಕತೆ ನಡೆಸಲಿದ್ದಾರೆ.
ಗಾಝಾದಲ್ಲಿ ಕದನ ವಿರಾಮಕ್ಕೆ ಅಮೆರಿಕ ಮುಂದಿರಿಸಿದ್ದ ಪ್ರಸ್ತಾವನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೊಸ ಷರತ್ತುಗಳನ್ನು ವಿಧಿಸಿದ್ದರಿಂದ ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಜಾರಿ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದ ಮಾತುಕತೆ ಪ್ರಗತಿ ಸಾಧಿಸಿರಲಿಲ್ಲ. ಹಮಾಸ್ ಮತ್ತು ಇಸ್ರೇಲ್ ನಿಲುವಿನ ನಡುವಿನ ಅಂತರವನ್ನು ಮುಚ್ಚಲು ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿತ್ತು.
`ಇದು ನಿರ್ಣಾಯಕ ಘಳಿಗೆ. ಒತ್ತೆಯಾಳುಗಳನ್ನು ಮನೆಗೆ ತಲುಪಿಸಲು, ಕದನ ವಿರಾಮ ಸಾಧ್ಯವಾಗಿಸಲು ಹಾಗೂ ಶಾಂತಿ ಮತ್ತು ಭದ್ರತೆಯನ್ನು ಶಾಶ್ವತವಾಗಿಸುವ ಉತ್ತಮ ಹಾದಿಯಲ್ಲಿ ಎಲ್ಲರನ್ನೂ ಇರಿಸಲು ಅತ್ಯುತ್ತಮ, ಬಹುಷಃ ಕೊನೆಯ ಅವಕಾಶವಾಗಿರಬಹುದು' ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಜತೆಗಿನ ಸಭೆಯಲ್ಲಿ ಬ್ಲಿಂಕೆನ್ ಹೇಳಿದರು.
ಕದನ ವಿರಾಮ ಮಾತುಕತೆಗಳನ್ನು ಹಳಿ ತಪ್ಪಿಸಲು ಪರಿಸ್ಥಿತಿ ಉಲ್ಬಣಗೊಳಿಸುವ ಕ್ರಮಗಳನ್ನು ಯಾರೂ ತೆಗೆದುಕೊಳ್ಳಬಾರದು ಎಂದು ನೆತನ್ಯಾಹು ಹಾಗೂ ಬಲಪಂಥೀಯ ಮಿತ್ರರಿಗೆ ಪರೋಕ್ಷ ಸಂದೇಶ ರವಾನಿಸಿದ ಬ್ಲಿಂಕೆನ್ ` ಇದು ಪೂರ್ಣಗೊಳಿಸುವ ಸಮಯ. ಯಾರೂ ಈ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸುವ ಸಮಯವಾಗಿದೆ. ಆದ್ದರಿಂದ ಯಾವುದೇ ಉಲ್ಬಣ, ಪ್ರಚೋದನೆಗಳಿಲ್ಲ ಎಂಬುದನ್ನು ಖಚಿತಪಡಿಸಲು ನಾವು ಬಯಸಿದ್ದೇವೆ. ಒಪ್ಪಂದವನ್ನು ಸಾಧ್ಯವಾಗಿಸುವ ಹಾದಿಯಲ್ಲಿ ಅಡೆತಡೆಯನ್ನು ಉಂಟು ಮಾಡಲು ಅವಕಾಶವಿಲ್ಲ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಈ ಮಧ್ಯೆ, ಹಮಾಸ್ನ ಹಠಮಾರಿ ಧೋರಣೆ ಕದನ ವಿರಾಮ ಒಪ್ಪಂದಕ್ಕೆ ಅಡ್ಡಿಯಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದು ಗಾಝಾ ಒಪ್ಪಂದದ ಬಗ್ಗೆ ಅವರ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಆಗ್ರಹಿಸಿದ್ದಾರೆ. ಹಮಾಸ್ ಈ ಕ್ಷಣದವರೆಗೂ ಹಠಮಾರಿಯಾಗಿಯೇ ಉಳಿದಿದೆ. ದೋಹಾ ಮಾತುಕತೆಗೆ ಅವರು ಪ್ರತಿನಿಧಿಯನ್ನೂ ಕಳಿಸಿಲ್ಲ. ಆದ್ದರಿಂದ ಇಸ್ರೇಲ್ ಸರಕಾರದ ಮೇಲಲ್ಲ, ಹಮಾಸ್ ಮೇಲೆ ಒತ್ತಡ ಹೆಚ್ಚಿಸಬೇಕಾಗಿದೆ ಎಂದವರು ಸಚಿವ ಸಂಪುಟದ ಸಭೆಯ ಬಳಿಕ ಹೇಳಿಕೆ ನೀಡಿದ್ದಾರೆ.
ಕದನ ವಿರಾಮ ಪ್ರಸ್ತಾವನೆಗೆ ಹೊಸ ಹೊಸ ಷರತ್ತುಗಳನ್ನು ಇಸ್ರೇಲ್ ಸೇರಿಸುತ್ತಿರುವುದು ಮಾತುಕತೆಯ ಪ್ರಗತಿಗೆ ಅಡ್ಡಿಯಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅಮೆರಿಕವು ಇಸ್ರೇಲ್ ಕುರಿತ ಮೃದುಧೋರಣೆಯನ್ನು ಸಡಿಲಿಸಿದೆ. ಕದನ ವಿರಾಮ ಒಪ್ಪಂದದ ಜವಾಬ್ದಾರಿ ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಮೇಲಿದೆ ಎಂದು ಈ ಹಿಂದೆ ಪ್ರತಿಪಾದಿಸುತ್ತಿದ್ದ ಬ್ಲಿಂಕೆನ್, ಈಗ ` ಇಸ್ರೇಲ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಪಕ್ಷಗಳೂ ಜವಾಬ್ದಾರರು' ಎಂದು ಹೇಳಿರುವುದು ಗಮನಾರ್ಹವಾಗಿದೆ.
► ಕದನ ವಿರಾಮ ಇನ್ನೂ ಸಾಧ್ಯ : ಬೈಡನ್
ಇಸ್ರೇಲ್ ಮತ್ತು ಹಮಾಸ್ ಪರಸ್ಪರ ದೋಷಾರೋಪಣೆ ಮಾಡುತ್ತಿದ್ದರೂ ಗಾಝಾ ಕದನ ವಿರಾಮ ಒಪ್ಪಂದ ಇನ್ನೂ ಸಾಧ್ಯವಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಮಾತುಕತೆ ಇನ್ನೂ ನಡೆಯುತ್ತಿದೆ ಮತ್ತು ನಾವು ಪ್ರಯತ್ನ ಕೈಬಿಟ್ಟಿಲ್ಲ. ಒಪ್ಪಂದ ಇನ್ನೂ ಸಾಧ್ಯವಿದೆ ಎಂದು ಬೈಡನ್ ಪ್ರತಿಪಾದಿಸಿದ್ದಾರೆ.
ಕದನ ವಿರಾಮ ಒಪ್ಪಂದ ಸಾಧ್ಯವಾಗಿಸಲು ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಲೆ ಒತ್ತಡ ಹೆಚ್ಚಿಸುವಂತೆ ಅಮೆರಿಕವನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮಿತ್ರದೇಶ ಜೋರ್ಡಾನ್, ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿ ಇಸ್ರೇಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಹಾಗೂ ಹಮಾಸ್ ಆಗ್ರಹಿಸಿವೆ.