ಉಕ್ರೇನ್ನಲ್ಲಿ ಹಿಮಬಿರುಗಾಳಿ: 10 ಮಂದಿ ಸಾವು, 2,500 ಜನರ ರಕ್ಷಣೆ
ಸಾಂದರ್ಭಿಕ ಚಿತ್ರ Photo: NDTV
ಕೀವ್: ಉಕ್ರೇನ್ನಲ್ಲಿ ಬೀಸಿದ ತೀವ್ರ ಹಿಮಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ. ದೇಶದ ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಆಂತರಿಕ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
ದಕ್ಷಿಣ ಉಕ್ರೇನ್ನಲ್ಲಿ ಅತೀ ಹೆಚ್ಚು ನಾಶ-ನಷ್ಟ ಸಂಭವಿಸಿದ್ದು ಒಡೆಸಾದ ಕಪ್ಪುಸಮುದ್ರ ವಲಯದಲ್ಲಿ ರಸ್ತೆಗಳ ಮೇಲೆ ಹಿಮದ ರಾಶಿಬಿದ್ದು ಹಲವು ಬಸ್ಸು, ಕಾರುಗಳು ಉರುಳಿಬಿದ್ದಿವೆ. ಒಡೆಸಾ, ಖಾರ್ಕಿವ್, ಮಿಕೊಲಾಯಿವ್ ಮತ್ತು ಕೀವ್ ಪ್ರದೇಶಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳ ಸಹಿತ 23 ಮಂದಿ ಗಾಯಗೊಂಡಿದ್ದಾರೆ. 11 ಪ್ರಾಂತಗಳ 411 ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ್ದ 1,500ಕ್ಕೂ ಅಧಿಕ ವಾಹನಗಳನ್ನು ರಕ್ಷಿಸಲಾಗಿದೆ. ಒಡೆಸಾ ಪ್ರಾಂತದಲ್ಲಿ ಹಿಮದಲ್ಲಿ ಸಿಲುಕಿದ್ದ ಸುಮಾರು 2,500 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.