ಜಿ20 ನಿರ್ಣಯಕ್ಕೆ ತಡೆ: ರಶ್ಯ ಎಚ್ಚರಿಕೆ
ರಶ್ಯ ಅಧ್ಯಕ್ಷ ಪುಟಿನ್ Photo: PTI
ಮಾಸ್ಕೊ: ಈ ತಿಂಗಳು ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ತನ್ನ ಅಭಿಪ್ರಾಯಗಳನ್ನು ನಿರ್ಲಕ್ಷಿಸಿದರೆ ಅಂತಿಮ ನಿರ್ಣಯವನ್ನು ನಿರ್ಬಂಧಿಸುವುದಾಗಿ ರಶ್ಯ ಶುಕ್ರವಾರ ಎಚ್ಚರಿಕೆ ನೀಡಿದೆ.
ಸೆ.9 ಮತ್ತು 10ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ಪುಟಿನ್ರನ್ನು ವಿದೇಶಾಂಗ ಸಚಿವ ಲಾವ್ರೋವ್ ಪ್ರತಿನಿಧಿಸಲಿದ್ದಾರೆ. ಉಕ್ರೇನ್ನಲ್ಲಿ ಯುದ್ಧಾಪರಾಧ ನಡೆದಿರುವ ಆರೋಪದಡಿ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿರುವುದರಿಂದ ಪುಟಿನ್ ವಿದೇಶಕ್ಕೆ ಪ್ರಯಾಣಿಸುತ್ತಿಲ್ಲ ಎಂದು ವರದಿಯಾಗಿದೆ.
ಶೃಂಗಸಭೆಯ ಸಿದ್ಧತೆಗೆ ನಡೆದ ಸಭೆಯಲ್ಲಿ ಪಾಶ್ಚಿಮಾತ್ಯರು ಉಕ್ರೇನ್ ವಿಷಯವನ್ನು ಎತ್ತಿದ್ದಾರೆ. ಆದರೆ ಇದು ನಮ್ಮ ಮಟ್ಟಿಗೆ ಮುಗಿದಿರುವ ವಿಷಯವಾಗಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಜಿ20 ಶೃಂಗಸಭೆಯ ನಿರ್ಣಯದಲ್ಲಿ ನಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ನಿರ್ಣಯನ್ನು ತಡೆಹಿಡಿಯಲಾಗುವುದು. ಪಾಶ್ಚಿಮಾತ್ಯರು ತಮ್ಮ ಕಾರ್ಯಸೂಚಿಯನ್ನು ಮುಂದಿಟ್ಟಿಕೊಂಡು ಅಂತರಾಷ್ಟ್ರೀಯ ಸಂಸ್ಥೆಗಳನ್ನು ಕಡೆಗಣಿಸುತ್ತಿದ್ದಾರೆ. ಒಂದು ವೇಳೆ ಜಿ20 ಸಭೆಯಲ್ಲಿ ಒಮ್ಮತ ಮೂಡದಿದ್ದರೆ ಜಿ20 ಅಧ್ಯಕ್ಷತೆಯು ಈ ಕುರಿತು ಹೇಳಿಕೆ ನೀಡಲಿದೆ' ಎಂದು ಲಾವ್ರೋವ್ ಹೇಳಿದ್ದಾರೆ.