ಸ್ಕಾಟ್ಲೆಂಡ್ ಪ್ರವಾಸಿ ತಾಣದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹ ಪತ್ತೆ
ಲಂಡನ್: ಸ್ಕಾಟ್ಲೆಂಡ್ ನ ಜನಪ್ರಿಯ ಪ್ರವಾಸಿತಾಣದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹ ಬುಧವಾರ ನೀರಿನಲ್ಲಿ ಪತ್ತೆಯಾಗಿದೆ. ಗ್ಯಾರಿ ಮತ್ತು ಟ್ಯುಮ್ಮೆಲ್ ನದಿಗಳ ಸಂಗಮವಾಗುವ ಪರ್ತ್ ಶೈರ್ ನ ವಾಯುವ್ಯ ಪಿಟ್ಲೋಚ್ರಿ ಎಂಬಲ್ಲಿನ ಕಲ್ಲುಬಂಡೆಗಳಿಂದ ಸುತ್ತುವರಿಯಲ್ಪಟ್ಟ ಆಕರ್ಷಕ ಜಲಪಾತ ಲಿನ್ ಆಫ್ ಟ್ಯುಮೆಲ್ ನಲ್ಲಿ ನೀರಿನಲ್ಲಿ ತೇಲಾಡುತ್ತಿದ್ದ ಎರಡು ಪುರುಷರ ದೇಹಗಳನ್ನು ತುರ್ತು ಸೇವೆಗಳ ಸಿಬ್ಬಂದಿ ಬುಧವಾರ ರಾತ್ರಿ ಹೊರತೆಗೆದಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ದುಂಡೀ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದ ನಾಲ್ಕು ಮಂದಿ ವಿದ್ಯಾರ್ಥಿಗಳು ಚಾರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ನೀರಿಗೆ ಬಿದ್ದು ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳ ವಯಸ್ಸು 22 ಮತ್ತು 27 ಎಂದು ಹೇಳಲಾಗಿದೆ. ಇತರ ಇಬ್ಬರು ವಿದ್ಯಾರ್ಥಿಗಳು ತುರ್ತುಸೇವಾ ವಿಭಾಗಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
"ಆಂಧ್ರಪ್ರದೇಶ ಮೂಲದ ಇಬ್ಬರು ವಿದ್ಯಾರ್ಥಿಗಳು ಬುಧವಾರ ಸಂಜೆ ನಡೆದ ಘಟನೆಯಲ್ಲಿ ನೀರಿನಲ್ಲಿ ಮುಳುಗಿದ್ದು, ಅವರ ಮೃತದೇಹಗಳು ಕೆಳ ತೊರೆಯಲ್ಲಿ ಕೆಲ ಕಾಲ ಬಳಿಕ ಪತ್ತೆಯಾಗಿದೆ. ಭಾರತದ ಕಾನ್ಸುಲೇಟ್ ಜನರಲ್, ವಿದ್ಯಾರ್ಥಿಗಳ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಅಧಿಕಾರಿಗಳು ಬ್ರಿಟನ್ ನಲ್ಲಿ ವಾಸವಿರುವ ವಿದ್ಯಾರ್ಥಿಗಳ ಸಂಬಂಧಿಕರನ್ನು ಭೇಟಿ ಮಾಡಿದ್ದಾರೆ. ದುಂಡೀ ವಿಶ್ವವಿದ್ಯಾನಿಲಯ ಕೂಡಾ ಎಲ್ಲ ಅಗತ್ಯ ನೆರವು ನೀಡುವ ಭರವಸೆ ನೀಡಿದೆ. ಏಪ್ರಿಲ್ 19ರಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆ ಬಳಿಕ ಶವಗಳನ್ನು ಭಾರತಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು" ಎಂದು ಭಾರತೀಯ ಹೈಕಮಿಷನ್ ವಕ್ತಾರರು ಹೇಳಿದ್ದಾರೆ.