ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 7 ಸಾವು; 16 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಪೇಷಾವರ: ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು ಇತರ 16 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನಿ ತಾಲಿಬಾನ್ಗಳ ಭದ್ರಕೋಟೆ ಎನಿಸಿದ್ದ ಖೈಬರ್ ಪಖ್ತೂಂಕ್ವಾದ ದಕ್ಷಿಣ ವಝೀರಿಸ್ತಾನದ ವಾನಾ ನಗರದಲ್ಲಿ ಶಾಂತಿ ಸಮಿತಿಯ ಕಚೇರಿಯ ಎದುರುಗಡೆ ಸ್ಫೋಟ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಪಾಕಿಸ್ತಾನಿ ತಾಲಿಬಾನ್ ಅಥವಾ ಟಿಟಿಪಿ ಎಂದು ಗುರುತಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಯನ್ನು ಸಾರ್ವಜನಿಕವಾಗಿ ವಿರೋಧಿಸುವ ಮತ್ತು ಸ್ಥಳೀಯ ನಿವಾಸಿಗಳ ನಡುವಿನ ವಿವಾದವನ್ನು ಬಗೆಹರಿಸಲು ನೆರವಾಗುತ್ತಿದ್ದ ಶಾಂತಿ ಸಮಿತಿಯ ಕಚೇರಿಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆದಿದೆ. ಇದುವರೆಗೆ ಯಾರೂ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ಆದರೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ