ಇಸ್ರೇಲ್ ನಿಂದ ಬಾಂಬ್ ದಾಳಿ : ಲೆಬನಾನ್ನಲ್ಲಿ ರಾಯಿಟರ್ಸ್ ಪತ್ರಕರ್ತ ಬಲಿ
Photo : @yenijournal
ಬೈರೂತ್: ಇಸ್ರೇಲ್ ಕಡೆಯಿಂದ ಹಾರಿಬಂದ ಕ್ಷಿಪಣಿ ಇಸ್ರೇಲ್ ನ ಗಡಿಭಾಗದಲ್ಲಿರುವ ದಕ್ಷಿಣ ಲೆಬನಾನ್ ನ ಗ್ರಾಮಕ್ಕೆ ಅಪ್ಪಳಿಸಿ ರಾಯ್ಟರ್ಸ್ ಪತ್ರಕರ್ತ ಮೃತಪಟ್ಟ ಘಟನೆ ವರದಿಯಾಗಿದೆ. ಇಬ್ಬರು ಪತ್ರಕರ್ತರ ಸಹಿತ 6 ಮಂದಿ ಗಾಯಗೊಂಡಿರುವುದಾಗಿ ರಾಯ್ಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಸೇನೆ ಮತ್ತು ಲೆಬನಾನ್ ನ ಸಶಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾದ ನಡುವೆ ಘರ್ಷಣೆ ಭುಗಿಲೆದ್ದಿದ್ದು ಇಸ್ರೇಲ್ ಗಡಿಯ ಸನಿಹದಲ್ಲಿರುವ ಅಲ್ಮಾ ಅಲ್ಶಾಬ್ ನಗರದಲ್ಲಿ ಪತ್ರಕರ್ತರ ತಂಡವೊಂದು ವರದಿ ಮಾಡುತ್ತಿದ್ದಾಗ ಇಸ್ರೇಲ್ ಕಡೆಯಿಂದ ಹಾರಿಬಂದ ಕ್ಷಿಪಣಿ ಇವರಿದ್ದ ಸ್ಥಳಕ್ಕೆ ಅಪ್ಪಳಿಸಿದೆ. ರಾಯ್ಟರ್ಸ್ ನ ವೀಡಿಯೊಗ್ರಾಫರ್ ಅಬ್ದುಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದು ಅಲ್ಜಝೀರಾ, ಏಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ಧಿಸಂಸ್ಥೆಯ ಪತ್ರಕರ್ತರ ಸಹಿತ 6 ಮಂದಿ ಗಾಯಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಮತ್ತು ಹಿಜ್ಬುಲ್ಲಾ ಮುಖಂಡರು ಈ ಘಟನೆಗೆ ಇಸ್ರೇಲ್ ಅನ್ನು ದೂಷಿಸಿದ್ದಾರೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ‘ತಮ್ಮ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಪತ್ರಕರ್ತರ ಮೇಲೆ ದಾಳಿ ನಡೆಸಲು ಅಥವಾ ಹತ್ಯೆ ಮಾಡಲು ನಾವು ಎಂದಿಗೂ ಬಯಸುವುದಿಲ್ಲ. ಆದರೆ ಈಗ ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ. ಏನು ಬೇಕಾದರೂ ಸಂಭವಿಸಬಹುದು. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.