ಐಸಿಜೆ ಆದೇಶದ ಬಳಿಕವೂ ಗಾಝಾದಲ್ಲಿ ಬಾಂಬ್ದಾಳಿ ಮುಂದುವರಿಕೆ
ಸಾಂದರ್ಭಿಕ ಚಿತ್ರ PC : NDTV
ಫೆಲೆಸ್ತೀನ್ ಪ್ರಜೆಗಳಿಗೆ ಹಾನಿಯಾಗದು: ಇಸ್ರೇಲ್ ಹೇಳಿಕೆ
ಗಾಝಾ: ರಫಾದಲ್ಲಿ ನಡೆಸುತ್ತಿರುವ ಮಿಲಿಟರಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಆದೇಶಿಸಿದ ಹೊರತಾಗಿಯೂ ಶನಿವಾರ ಗಾಝಾ ಪಟ್ಟಿಯ ಮೇಲೆ ಬಾಂಬ್ ಮಳೆಗರೆದಿರುವ ಇಸ್ರೇಲ್, ದಾಳಿಯಲ್ಲಿ ಫೆಲೆಸ್ತೀನ್ ಪ್ರಜೆಗಳಿಗೆ ಹಾನಿಯಾಗದು ಎಂದು ಪ್ರತಿಪಾದಿಸಿದೆ.
ಇದೇ ಸಂದರ್ಭ, ಗಾಝಾದಲ್ಲಿ ಕದನ ವಿರಾಮ ಜಾರಿಗೊಳ್ಳಲು ಪ್ರಯತ್ನಿಸುವ ಮಾತುಕತೆಗೆ ಶನಿವಾರ ಪ್ಯಾರಿಸ್ನಲ್ಲಿ ಚಾಲನೆ ದೊರಕಿದೆ. ಶುಕ್ರವಾರ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅಧ್ಯಕ್ಷತೆಯಲ್ಲಿ ಖತರ್, ಸೌದಿ ಅರೇಬಿಯಾದ ಪ್ರಧಾನಿಗಳು, ಈಜಿಪ್ಟ್ ಮತ್ತು ಜೋರ್ಡಾನ್ನ ವಿದೇಶಾಂಗ ಸಚಿವರು `ಕದನ ವಿರಾಮದ ಕುರಿತು ಸಭೆ ನಡೆಸಿದ್ದು , ಸಿಐಎ ಮುಖ್ಯಸ್ಥ ಬಿಲ್ ಬನ್ರ್ಸ್ ಇಸ್ರೇಲ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆʼ ಎಂದು ವರದಿಯಾಗಿದೆ.
ರಫಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಿ, ಈಜಿಪ್ಟ್ ಮತ್ತು ಗಾಝಾದ ನಡುವಿನ ರಫಾ ಗಡಿದಾಟನ್ನು ತೆರೆದಿಡುವಂತೆ ಇಸ್ರೇಲ್ಗೆ ಸೂಚಿಸಿದ್ದ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ), ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಹಮಾಸ್ಗೆ ಆದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಇಸ್ರೇಲ್, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದಿದೆ. `ಜನಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಅಥವಾ ಫೆಲೆಸ್ತೀನ್ ನಾಗರಿಕರಿಗೆ ಹಾನಿಯಾಗುವ ರೀತಿಯಲ್ಲಿ ರಫಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ' ಎಂದು ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ತಸಾಚಿ ಹನೆಬಿ ಹಾಗೂ ಇಸ್ರೇಲ್ ವಿದೇಶಾಂಗ ಸಚಿವಾಲಯದ ವಕ್ತಾರರು ಜಂಟಿ ಹೇಳಿಕೆ ನೀಡಿದ್ದಾರೆ.
2007ರಿಂದ ಗಾಝಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್, ರಫಾ ಕುರಿತ ಐಸಿಜೆ ಆದೇಶವನ್ನು ಸ್ವಾಗತಿಸಿದೆ. ಆದರೆ ಫೆಲೆಸ್ತೀನ್ನ ಇತರ ಪ್ರದೇಶಗಳನ್ನು ಆದೇಶದಿಂದ ಹೊರಗಿಡುವ ನಿರ್ಧಾರವನ್ನು ಟೀಕಿಸಿದೆ. ಈ ಮಧ್ಯೆ, ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಇಸ್ರೇಲ್ನ ಯುದ್ಧ ಕ್ಯಾಬಿನೆಟ್ ಸಚಿವ ಬೆನ್ನೀ ಗ್ಯಾಂಟ್ಸ್ಗೆ ಕರೆ ಮಾಡಿ ಕದನ ವಿರಾಮಕ್ಕೆ ನಡೆಯುವ ಹೊಸ ಪ್ರಯತ್ನಗಳು ಹಾಗೂ ರಫಾ ಗಡಿದಾಟನ್ನು ಮತ್ತೆ ತೆರೆಯುವ ಬಗ್ಗೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.
ಐಸಿಜೆ ಆದೇಶ | ನೈತಿಕವಾಗಿ ಅಸಂಗತ, ಅತಿರೇಕದಿಂದ ಕೂಡಿದೆ : ಇಸ್ರೇಲ್ ಟೀಕೆ
ಟೆಲ್ಅವೀವ್: ರಫಾದ ಮೇಲಿನ ಆಕ್ರಮಣವನ್ನು ತಕ್ಷಣದಿಂದ ನಿಲ್ಲಿಸುವಂತೆ ಐಸಿಜೆಯ ಸೂಚನೆ ಅತಿರೇಕದ ಮತ್ತು ನೈತಿಕವಾಗಿ ಅಸಂಗತದ ಆದೇಶವಾಗಿದೆ ಎಂದು ಇಸ್ರೇಲ್ ಟೀಕಿಸಿದೆ.
`ನಮ್ಮ ಪಡೆಗಳು ಗಾಝಾದಲ್ಲಿ ನರಹತ್ಯೆ ನಡೆಸಿರುವುದಾಗಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣ ಸತ್ಯಾಂಶಕ್ಕೆ ದೂರವಾಗಿದೆ. ಸ್ವರಕ್ಷಣೆಗಾಗಿ, ಹಮಾಸ್ ಅನ್ನು ನಾಶಗೊಳಿಸಲು ಮತ್ತು ಇಸ್ರೇಲ್ನ ಒತ್ತೆಯಾಳುಗಳ ಬಿಡುಗಡೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. 2023ರ ಅಕ್ಟೋಬರ್ 7ರಂದು ನಮ್ಮ ಪ್ರಜೆಗಳ ವಿರುದ್ಧದ ಭಯಾನಕ ಆಕ್ರಮಣಕ್ಕೆ ಪ್ರತಿಯಾಗಿ ನಮ್ಮ ಪ್ರದೇಶ, ಪ್ರಜೆಗಳನ್ನು ರಕ್ಷಿಸುವ ನಮ್ಮ ಬದ್ಧತೆ, ಅಂತರಾಷ್ಟ್ರೀಯ ಕಾನೂನು, ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದೇವೆ' ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.
ಐಸಿಜೆ ಆದೇಶಕ್ಕೆ ಸ್ಪೇನ್ ಸ್ವಾಗತ, ಬ್ರಿಟನ್ ಟೀಕೆ
ಗಾಝಾದ ರಫಾ ನಗರದ ಮೇಲಿನ ಆಕ್ರಮಣವನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದ ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಇಸ್ರೇಲ್ ಪಾಲಿಸಬೇಕು ಎಂದು ಸ್ಪೇನ್ ಶನಿವಾರ ಆಗ್ರಹಿಸಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪು ಕಾನೂನುಬದ್ಧವಾಗಿದೆ ಮತ್ತು ಕಡ್ಡಾಯವಾಗಿದೆ. ಇಸ್ರೇಲ್ ಅದನ್ನು ಅನುಸರಿಸಬೇಕು. ಒತ್ತೆಯಾಳುಗಳ ಬಿಡುಗಡೆ ಕುರಿತ ಆದೇಶಕ್ಕೂ ಇದು ಅನ್ವಯಿಸುತ್ತದೆ. ಗಾಝಾದ ಜನರ ಸಂಕಷ್ಟ ಮತ್ತು ಹಿಂಸಾಚಾರ ಅಂತ್ಯವಾಗಬೇಕು ಎಂದು ಸ್ಪೇನ್ನ ವಿದೇಶಾಂಗ ಸಚಿವ ಜೋಸ್ ಮ್ಯಾನುವೆಲ್ ಅಲ್ಬಾರೆಸ್ ಆಗ್ರಹಿಸಿದ್ದಾರೆ.
ಈ ಮಧ್ಯೆ, ಐಸಿಜೆಯ ಆದೇಶ ಹಮಾಸ್ ಅನ್ನು ಬಲಿಷ್ಟಗೊಳಿಸಲಿದೆ ಎಂದು ಬ್ರಿಟನ್ ಸರಕಾರ ಟೀಕಿಸಿದೆ. `ಇಸ್ರೇಲ್ ಮುಂದಿರಿಸಿದ ಉದಾರವಾದ ಒಪ್ಪಂದವನ್ನು ಹಮಾಸ್ ನಿರಾಕರಿಸಿರುವುದು ಗಾಝಾದಲ್ಲಿ ಈಗಲೂ ಸಂಘರ್ಷ ಮುಂದುವರಿಯಲು ಕಾರಣವಾಗಿದೆ. ಐಸಿಜೆ ಮುಂತಾದ ನ್ಯಾಯಾಲಯಗಳ ಮಧ್ಯಪ್ರವೇಶವು ಹಮಾಸ್ ಅನ್ನು ಮತ್ತಷ್ಟು ಬಲಪಡಿಸಲಿದೆ' ಎಂದು ಬ್ರಿಟನ್ನ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.