ಬ್ರೆಝಿಲ್: ಬೊಲ್ಸನಾರೊಗೆ 8 ವರ್ಷಗಳ ನಿಷೇಧ
ಬ್ರಸೀಲಿಯಾ: ದೇಶದ ಮತದಾನ ವ್ಯವಸ್ಥೆಯ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬ್ರೆಝಿಲ್ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸನಾರೊಗೆ ಯಾವುದೇ ಸಾರ್ವಜನಿಕ ಹುದ್ದೆಯಿಂದ 8 ವರ್ಷ ನಿಷೇಧ ವಿಧಿಸಿರುವುದಾಗಿ ವರದಿಯಾಗಿದೆ.
ಜನವರಿಯಲ್ಲಿ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಎಡಪಂಥೀಯ ಮುಖಂಡ ಲೂಯಿಸ್ ಇನಾಷಿಯೊ ಡ’ಸಿಲ್ವ ಮೇಲುಗೈ ಪಡೆದಿರುವುದನ್ನು ಒಪ್ಪಿಕೊಳ್ಳದ ಬೊಲ್ಸನಾರೊ, ಅಧ್ಯಕ್ಷೀಯ ಭವನ, ಸಂಸತ್ತು ಮತ್ತು ಸುಪ್ರೀಂಕೋರ್ಟ್ನ ಮೇಲೆ ಹಿಂಸಾತ್ಮಕ ಆಕ್ರಮಣ ನಡೆಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರು. ಬಳಿಕ ಬೊಲ್ಸನಾರೊ ಅವರ ಸಾವಿರಾರು ಬೆಂಬಲಿಗರು ಸಂಸತ್ತಿನ ಮೇಲೆ ದಾಳಿ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೈದು ದಾಂಧಲೆ ನಡೆಸಿದ್ದರು.
ಅಲ್ಲದೆ, ಅಧಿಕಾರದಲ್ಲಿದ್ದ ಸಂದರ್ಭ ಜುಲೈ 2022ರಲ್ಲಿ ಬೊಲ್ಸನಾರೊ ವಿದೇಶದ ರಾಜತಾಂತ್ರಿಕರ ಜತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಭೆಯಲ್ಲಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡಿದ್ದರು ಎಂಬ ಆರೋಪವಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ‘ಬೊಲ್ಸನಾರೊ ಅವರು ಬ್ರೆಝಿಲ್ನ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಅಪಾಯ ತಂದೊಡ್ಡುವ ಹಿಂಸಾತ್ಮಕ ಮಾತುಗಳನ್ನು ಆಡಿದ್ದರು ಮತ್ತು ಸುಳ್ಳು ಹೇಳಿದ್ದರು’ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬೊಲ್ಸನಾರೊ ‘ ಸುಪೀರಿಯರ್ ಚುನಾವಣಾ ನ್ಯಾಯಮಂಡಳಿಯ ನಿರ್ಧಾರ ಬೆನ್ನಿಗೆ ಚೂರಿ ಹಾಕಿದಂತಾಗಿದೆ. ನಾನಿನ್ನೂ ಸತ್ತಿಲ್ಲ. ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು’ ಎಂದಿದ್ದಾರೆ.