ಬ್ರೆಝಿಲ್ ವಿಮಾನ ಪತನ | ಸ್ವಲ್ಪದರಲ್ಲೇ ವಿಮಾನ ಪ್ರಯಾಣ ತಪ್ಪಿಸಿಕೊಂಡಾತ ಬದುಕುಳಿದ!
ವಿಮಾನದಲಿದ್ದ ಎಲ್ಲಾ 57 ಪ್ರಯಾಣಿಕರು, 4 ಸಿಬ್ಬಂದಿಗಳು ಮೃತ್ಯು
PC : NDTV
ಸಾವೊ ಪೌಲೊ: ತಡವಾಗಿ ಬಂದು ವಿಮಾನ ಪ್ರಯಾಣ ತಪ್ಪಿಸಿಕೊಂಡ ಬ್ರೆಝಿಲ್ ವ್ಯಕ್ತಿಯೊಬ್ಬ ಜೀವಾಪಾಯದಿಂದ ಪಾರಾಗಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಅವರು ಪ್ರಯಾಣಿಸಬೇಕಿದ್ದ ವೊಯೆಪಾಸ್ 2283 ವಿಮಾನವು ಸಾವೊ ಪೌಲೊ ಬಳಿ ಅಪಘಾತಕ್ಕೀಡಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರೂ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ.
ಅಡ್ರಿಯಾನೊ ಆಸಿಸ್ ಎಂಬ ವ್ಯಕ್ತಿ ವೊಯೆಪಾಸ್ 2283 ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ, ಆ ವಿಮಾನವು ಸಾವೊ ಪೌಲೊ ಬಳಿ ಅಪಘಾತಕ್ಕೀಡಾಗಿ, ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಮೃತಪಟ್ಟಿದ್ದರು. ಈ ಕುರಿತು ಸ್ಥಳೀಯ ಸುದ್ದಿವಾಹಿನಿ ಟಿವಿ ಗ್ಲೋಬೊಗೆ ಸಂದರ್ಶನ ನೀಡಿರುವ ಅಡ್ರಿಯಾನೊ, ನಾನು ತಡವಾಗಿದ್ದರಿಂದ, ನನ್ನನ್ನು ವಿಮಾನ ಪ್ರಯಾಣದಿಂದ ತಡೆ ಹಿಡಿಯಲಾಯಿತು ಎಂದು ಹೇಳಿಕೊಂಡಿದ್ದಾರೆ.
ವಿಮಾನ ಸಂಸ್ಥೆಯ ಸ್ಪಷ್ಟೀಕರಣದ ಪ್ರಕಾರ, ಅಡ್ರಿಯಾನೊ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ 58 ಪ್ರಯಾಣಿಕರು ತೆರಳಬೇಕಿತ್ತು. ಆದರೆ, ಆ ವಿಮಾನವನ್ನು ಓರ್ವ ಪ್ರಯಾಣಿಕ ಮಾತ್ರ ತಪ್ಪಿಸಿಕೊಂಡಿದ್ದರು. ಅದು ಅಡ್ರಿಯಾನೊ ಆಸಿಸ್ ಆಗಿದ್ದರು. ಆದರೆ, ಆ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಅಡ್ರಿಯಾನೊರನ್ನು ವಿಳಂಬವಾಗಿ ಬಂದಿದ್ದರಿಂದ ವಿಮಾನ ಯಾನ ಸಂಸ್ಥೆಯ ಉದ್ಯೋಗಿಯೊಬ್ಬರು ತಡೆದಿದ್ದರು. ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದರೂ, ಅಡ್ರಿಯಾನೊಗೆ ವಿಮಾನದಲ್ಲಿ ಪ್ರಯಾಣಿಸಲು ಆ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಅವಕಾಶ ನೀಡಿರಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಅಡ್ರಿಯಾನೊ ಆಸಿಸ್, “ನಾನು ತಡವಾಗಿದ್ದರಿಂದ, ಆ ಉದ್ಯೋಗಿಯು ನನಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲು ಅವಕಾಶ ನೀಡಿರಲಿಲ್ಲ. ನಂತರ ವಿಮಾನ ಅಪಘಾತಕ್ಕೀಡಾಗಿರುವ ಸುದ್ದಿ ತಿಳಿದು, ನಾನಾತನನ್ನು ಆಲಂಗಿಸಿಕೊಂಡೆ. ಇದು ನಿಜಕ್ಕೂ ನಂಬಲಸಾಧ್ಯ” ಎಂದು ಹೇಳಿಕೊಂಡಿದ್ದಾರೆ.
ವೊಯೆಪಾಸ್ ವಿಮಾನವು ತನ್ನ ನಿಯಂತ್ರಣ ಕಳೆದುಕೊಂಡು ಸಾವೊ ಪೌಲೊದ ವಾಯುವ್ಯ ದಿಕ್ಕಿನಿಂದ ಸುಮಾರು 80 ಕಿಮೀ ದೂರವಿರುವ ವಿನ್ಹೆಡೊ ಬಳಿಯ ವಸತಿ ಪ್ರದೇಶವೊಂದರಲ್ಲಿ ಅಪಘಾತಕ್ಕೀಡಾಗಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 57 ಪ್ರಯಾಣಿಕರು ಹಾಗೂ ನಾಲ್ಕು ಮಂದಿ ವಿಮಾನ ಸಿಬ್ಬಂದಿಗಳೆಲ್ಲರೂ ಮೃತಪಟ್ಟಿದ್ದಾರೆ.