ಇಸ್ರೇಲ್ನ ಗಾಝಾ ಕಾರ್ಯಾಚರಣೆಯನ್ನು ಹೋಲೋಕಾಸ್ಟ್ಗೆ ಹೋಲಿಸಿದ ಬ್ರೆಝಿಲ್ ಅಧ್ಯಕ್ಷ
ಇಸ್ರೇಲ್ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಬ್ರೆಝಿಲ್
ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಶಿಯೋ ಲುಲಾ ಡಾ ಸಿಲ್ವಾ (Photo credit:X/@LulaOficial - @ricardostuckert)
ಬ್ರೆಜಿಲ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಶಿಯೋ ಲುಲಾ ಡಾ ಸಿಲ್ವಾ ಅವರು ಹೋಲೋಕಾಸ್ಟ್ಗೆ ಹೋಲಿಸಿದ ನಂತರ ಎರಡೂ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಇಸ್ರೇಲ್ನಲ್ಲಿರುವ ತನ್ನ ರಾಯಭಾರಿಯನ್ನು ಬ್ರೆಝಿಲ್ ವಾಪಸ್ ಕರೆಸಿಕೊಂಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಸ್ರೇಲ್, ಬ್ರೆಝಿಲ್ ಅಧ್ಯಕ್ಷರಿಗೆ ತನ್ನ ದೇಶಕ್ಕೆ ಸ್ವಾಗತವಿಲ್ಲ ಎಂದು ಹೇಳಿದೆ.
"ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನಿ ಜನರೊಂದಿಗೆ ನಡೆಯುತ್ತಿರುವುದು ಇತಿಹಾಸದ ಯಾವುದೇ ಇತರ ಕ್ಷಣದಲ್ಲಿ ನಡೆದಿಲ್ಲ. ವಾಸ್ತವವಾಗಿ ಅದು ನಡೆದಿದೆ, ಯಹೂದಿಗಳನ್ನು ಹಿಟ್ಲರ್ ಕೊಲ್ಲಲು ನಿರ್ಧರಿಸಿದಾಗ,” ಎಂದು ಲುಲಾ ರವಿವಾರ ಹೇಳಿದ್ದರು.
ಎರಡನೇ ಜಾಗತಿಕ ಮಹಾಯುದ್ಧದ ವೇಳೆ ನಾಝಿಗಳು 60 ಲಕ್ಷ ಯಹೂದಿ ಜನರನ್ನು ವ್ಯವಸ್ಥಿತವಾಗಿ ಹತ್ಯೆಗೈದಿದ್ದರು.
ಬ್ರೆಝಿಲ್ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವರ ಹೇಳಿಕೆ ಅಗೌರವಪೂರ್ವಕವಾಗಿದೆ ಮತ್ತು ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಇಸ್ರೇಲ್ ವಿದೇಶ ಸಚಿವ ಇಸ್ರೇಲ್ ಕಟ್ಝ್ ಹೇಳಿಕೆ ನೀಡಿ, ಲುಲಾ ಅವರು ತಮ್ಮ ಹೇಳಿಕೆ ವಾಪಸ್ ಪಡೆಯುವ ತನಕ ಅವರಿಗೆ ಇಸ್ರೇಲ್ಗೆ ಸ್ವಾಗತವಿಲ್ಲ ಎಂದು ಹೇಳಿದರು.
“ನಾವು ಮರೆಯುವುದೂ ಇಲ್ಲ ಕ್ಷಮಾದಾನವೂ ನೀಡುವುದಿಲ್ಲ,” ಎಂದು ಕಟ್ಝ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬ್ರೆಝಿಲ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬ್ರೆಝಿಲ್ನಲ್ಲಿರುವ ಇಸ್ರೇಲ್ ರಾಯಭಾರಿ ಡೇನಿಯಲ್ ಝೊನ್ಶೈನ್ ಅವರನ್ನು ವಾಪಸ್ ಕರೆಸಿಕೊಂಡಿದೆ.
“ಟೆಲ್ ಅವೀವ್ನಲ್ಲಿರುವ ಬ್ರೆಝಿಲ್ ರಾಯಭಾರಿಯನ್ನೂ ವಾಪಸ್ ಕರೆಸಿಕೊಳ್ಳಲಾಗಿದೆ,” ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.ಲುಲಾ ಹೇಳಿಕೆಗೆ ಅವರ ದೇಶದಲ್ಲೂ ಖಂಡನೆ ವ್ಯಕ್ತವಾಗಿದೆ.