ಟರ್ಕಿಗೆ ಪಾಲುದಾರ ರಾಷ್ಟ್ರ ಸ್ಥಾನಮಾನ : `ಬ್ರಿಕ್ಸ್' ಪ್ರಸ್ತಾಪ
ಒಮರ್ ಬೊಲಾಟ್ | PC : X/@omerbolatTR
ಅಂಕಾರ : ಪೂರ್ವ ಮತ್ತು ಪಾಶ್ಚಿಮಾತ್ಯ ಸಂಬಂಧಗಳನ್ನು ಸಮತೋಲನಗೊಳಿಸುವ ಪ್ರಯತ್ನ ಮುಂದುವರಿಸಿರುವ ಟರ್ಕಿಗೆ ಬ್ರಿಕ್ಸ್ ರಾಷ್ಟ್ರಗಳ ಗುಂಪು `ಪಾಲುದಾರ ರಾಷ್ಟ್ರ'ದ ಸ್ಥಾನಮಾನವನ್ನು ಪ್ರಸ್ತಾಪಿಸಿದೆ ಎಂದು ಟರ್ಕಿಯ ಆರ್ಥಿಕ ಮತ್ತು ವ್ಯಾಪಾರ ಸಚಿವ ಒಮರ್ ಬೊಲಾಟ್ ಹೇಳಿದ್ದಾರೆ.
ನೇಟೊ ಸದಸ್ಯನಾಗಿರುವ ಟರ್ಕಿ ಇತ್ತೀಚಿನ ದಿನಗಳಲ್ಲಿ ಉದಯೋನ್ಮುಖ ಆರ್ಥಿಕತೆಯ ಬ್ರಿಕ್ಸ್ ಗುಂಪಿಗೆ ಸೇರಲು ಆಸಕ್ತಿ ತೋರಿದೆ. `ಬ್ರಿಕ್ಸ್' ಒಕ್ಕೂಟದಲ್ಲಿ ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಇಥಿಯೋಪಿಯಾ, ಇರಾನ್, ಈಜಿಪ್ಟ್ ಮತ್ತು ಯುಎಇ ರಾಷ್ಟ್ರಗಳು ಸದಸ್ಯತ್ವ ಪಡೆದಿವೆ.
ಕಳೆದ ತಿಂಗಳು ರಶ್ಯದ ಕಝಾನ್ನಲ್ಲಿ ನಡೆದಿದ್ದ ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ ಟರ್ಕಿ ಅಧ್ಯಕ್ಷ ಎರ್ಡೋಗನ್ ಪಾಲ್ಗೊಂಡಿದ್ದರು. `ಟರ್ಕಿಗೆ ಪಾಲುದಾರ ಸದಸ್ಯತ್ವದ ಸ್ಥಾನಮಾನದ ಪ್ರಸ್ತಾಪ ಬಂದಿದೆ. ಇದು ಬ್ರಿಕ್ಸ್ ನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಪರಿವರ್ತನಾ ಪ್ರಕ್ರಿಯೆಯಾಗಿದೆ' ಎಂದು ಬೊಲಾಟ್ ಹೇಳಿದ್ದಾರೆ. ಆದರೆ ಟರ್ಕಿ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ ಎಂದು ವರದಿಯಾಗಿದೆ.
ನಾವು ಪೂರ್ಣಪ್ರಮಾಣದ ಸದಸ್ಯತ್ವಕ್ಕೆ ಬೇಡಿಕೆ ಇರಿಸಿದ್ದೇವೆ. ಪಾಲುದಾರ ರಾಷ್ಟ್ರದ ಸ್ಥಾನಮಾನವನ್ನು ಬಯಸಿಲ್ಲ ಎಂದು ಎರ್ಡೋಗನ್ ಅವರ ಆಡಳಿತಾರೂಢ ಎ.ಕೆ. ಪಕ್ಷದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಕಳೆದ ವಾರ `ರಾಯ್ಟರ್ಸ್' ವರದಿ ಮಾಡಿತ್ತು.