ಬ್ರಿಕ್ಸ್ ಶೃಂಗಸಭೆ: ಉಕ್ರೇನ್ ಯುದ್ಧಕ್ಕೆ ಪುಟಿನ್ ಸಮರ್ಥನೆ
ಮಾಸ್ಕೊ: ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಮುಖಂಡರ ಸಭೆಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್‍ನಲ್ಲಿ ರಶ್ಯದ ಯುದ್ಧವನ್ನು ಸಮರ್ಥಿಸಿದರು ಹಾಗೂ ಅಮೆರಿಕದ ಜಾಗತಿಕ ಪ್ರಾಬಲ್ಯಕ್ಕೆ ಬ್ರಿಕ್ಸ್ ಸಂಘಟನೆ ಸೂಕ್ತ ಪ್ರತಿಕ್ರಮವಾಗಿದೆ ಎಂದು ಶ್ಲಾಘಿಸಿದ್ದಾರೆ.
ರಶ್ಯದ ವಿರುದ್ಧ ಉಕ್ರೇನ್ ಹಾಗೂ ಅಮೆರಿಕ ನಿರಂತರ ನಡೆಸುತ್ತಿದ್ದ ದ್ವೇಷದ ಕ್ರಮಗಳು ಉಕ್ರೇನ್ ಯುದ್ಧಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯರು ಮತ್ತು ಉಕ್ರೇನ್‍ನಲ್ಲಿನ ಅವರ ಕೈಗೊಂಬೆ ಸರಕಾರದ ಪ್ರಚೋದನೆ ಈ ಯುದ್ಧಕ್ಕೆ ಮೂಲ ಕಾರಣ' ಎಂದು ಪುಟಿನ್ ಹೇಳಿದ್ದಾರೆ.
ಜಗತ್ತಿನಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಕೆಲವರ ಮಹಾತ್ವಾಕಾಂಕ್ಷೆ ಉಕ್ರೇನ್ ಯುದ್ಧಕ್ಕೆ ಕಾರಣವಾಗಿದೆ. 18 ತಿಂಗಳ ಯುದ್ಧವನ್ನು ಅಂತ್ಯಗೊಳಿಸಲು ಮಾತುಕತೆಗೆ ರಶ್ಯ ಮುಕ್ತವಾಗಿದೆ. ಬ್ರಿಕ್ಸ್ ವಿಸ್ತರಣೆಯ ಮೂಲಕ ಅದನ್ನು ಸಶಕ್ತಗೊಳಿಸಿ ಅಮೆರಿಕದ ಪ್ರಾಬಲ್ಯಕ್ಕೆ ಸೂಕ್ತ ಇದಿರೇಟು ನೀಡಬೇಕಾಗಿದೆ ಎಂದು ಪುಟಿನ್ ಹೇಳಿದ್ದಾರೆ.