ಬ್ರಿಟನ್: ಜೈಲುಗಳಿಂದ ಸಾವಿರಾರು ಕೈದಿಗಳ ಬಿಡುಗಡೆಗೆ ನಿರ್ಧಾರ
ಶಬಾನಾ ಮಹ್ಮೂದ್ | PC : NDTV
ಲಂಡನ್ : ಬ್ರಿಟನ್ನ ಹಲವು ಜೈಲುಗಳಲ್ಲಿ ಕೈದಿಗಳು ಕಿಕ್ಕಿರಿದು ತುಂಬಿರುವ ಕಾರಣ ಜೈಲು ವ್ಯವಸ್ಥೆ ಕುಸಿಯುವುದನ್ನು ತಡೆಯಲು ಸೆಪ್ಟಂಬರ್ ನ ಒಳಗೆ ಸಾವಿರಾರು ಕೈದಿಗಳನ್ನು ಬಿಡುಗಡೆಗೊಳಿಲು ನಿರ್ಧರಿಸಿರುವುದಾಗಿ ಬ್ರಿಟನ್ನ ನ್ಯಾಯ ಇಲಾಖೆಯ ಸಚಿವೆ ಶಬಾನಾ ಮಹ್ಮೂದ್ ಘೋಷಿಸಿದ್ದಾರೆ.
2023ರಿಂದಲೂ ಬ್ರಿಟನ್ನ ಜೈಲುಗಳು 99%ದಷ್ಟು ತುಂಬಿದ್ದು ಹೆಚ್ಚುವರಿ 700ರಷ್ಟು ಪುರುಷ ಕೈದಿಗಳಿಗೆ ಮಾತ್ರ ಸ್ಥಳಾವಕಾಶವಿದೆ. ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುವ ಅಪಾಯವಿದೆ. ಮುಂದಿನ ಮಾರ್ಚ್ನೊಳಗೆ ಹೆಚ್ಚುವರಿ 1,000 ಟ್ರೈನೀ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಿಸಲಾಗುವುದು. ಹೆಚ್ಚುವರಿ 20,000 ಸ್ಥಳಾವಕಾಶ ಇರುವ 6 ಹೊಸ ಜೈಲುಗಳನ್ನು ನಿರ್ಮಿಸಲು ನಿರ್ಧರಿಸಿರುವುದಾಗಿ ಸರಕಾರ ಹೇಳಿದೆ.
ಜುಲೈ 12ರವರೆಗಿನ ಅಂಕಿಅಂಶದ ಪ್ರಕಾರ ಬ್ರಿಟನ್ನ ಜೈಲುಗಳಲ್ಲಿ 87,505 ಕೈದಿಗಳಿದ್ದು ಇವರಲ್ಲಿ 83,755 ಪುರುಷರು. ಹೆಚ್ಚುವರಿಯಾಗಿ ಕೇವಲ 1,451 ಕೈದಿಗಳಿಗೆ ಸ್ಥಳಾವಕಾಶವಿದೆ. ನಿಯಮದ ಪ್ರಕಾರ ವರ್ಷದ ಎಲ್ಲಾ ಸಮಯಗಳಲ್ಲೂ ಜೈಲುಗಳಲ್ಲಿ ಹೆಚ್ಚುವರಿ 1,425 ಪುರುಷ ಕೈದಿಗಳಿಗೆ ಅವಕಾಶ ಇರಬೇಕು ಎಂದು ಕಾರಾಗೃಹಗಳ ಮುಖ್ಯ ಅಧೀಕ್ಷಕ ಚಾರ್ಲಿ ಟೇಲರ್ ಹೇಳಿದ್ದಾರೆ.
ಯೋಜನೆಯ ಪ್ರಕಾರ, ತಮ್ಮ ಶಿಕ್ಷಾವಧಿಯ 50%ದಷ್ಟನ್ನು ಪೂರೈಸಿದ ಕೈದಿಗಳನ್ನು ಬಿಡುಗಡೆಗೊಳಿಸಲಾಗುವುದು. ಆದರೆ ಹಿಂಸಾತ್ಮಕ ಪ್ರಕರಣಗಳ ಅಪರಾಧಿಗಳು, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಪ್ರಕರಣದ ಅಪರಾಧಿಗಳು, ಜೀವಾವಧಿ ಶಿಕ್ಷೆಗೆ ಗುರಿಯಾದವರಿಗೆ ಈ ಸೌಲಭ್ಯ ದೊರಕುವುದಿಲ್ಲ ಎಂದು ಮೂಲಗಳು ಹೇಳಿವೆ.