ಉಕ್ರೇನ್ನಲ್ಲಿ 1 ತಿಂಗಳ ಕದನ ವಿರಾಮಕ್ಕೆ ಬ್ರಿಟನ್, ಫ್ರಾನ್ಸ್ ಪ್ರಸ್ತಾಪ

Photo Credit | NDTV
ಪ್ಯಾರಿಸ್ : ರಶ್ಯ ಮತ್ತು ಉಕ್ರೇನ್ ನಡುವೆ ಒಂದು ತಿಂಗಳ ಕದನ ವಿರಾಮದ ಯೋಜನೆಯನ್ನು ಫ್ರಾನ್ಸ್ ಹಾಗೂ ಬ್ರಿಟನ್ ಸೋಮವಾರ ಪ್ರಸ್ತಾಪಿಸಿದ್ದು ಇದು ಯುದ್ಧವನ್ನು ಅಂತ್ಯಗೊಳಿಸುವ ಬಗ್ಗೆ ರಶ್ಯದ ಬದ್ಧತೆಯನ್ನು ಪರೀಕ್ಷಿಸುತ್ತದೆ ಎಂದು ಫ್ರಾನ್ಸ್ ಸರಕಾರ ಹೇಳಿದೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಡುವಿನ ಮಾತಿನ ಚಕಮಕಿ ಬಳಿಕ ಲಂಡನ್ನಲ್ಲಿ ಸಭೆ ಸೇರಿದ ಯುರೋಪ್ ರಾಷ್ಟ್ರಗಳ ಮುಖಂಡರು ಉಕ್ರೇನ್ನಲ್ಲಿನ ಯುದ್ಧದ ಬಗ್ಗೆ ಪರಾಮರ್ಶೆ ನಡೆಸಿದ್ದರು. ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ` ಬ್ರಿಟನ್ ಮತ್ತು ಫ್ರಾನ್ಸ್ ಉಕ್ರೇನ್ನಲ್ಲಿ `ಆಗಸ, ಸಮುದ್ರ ಮತ್ತು ಇಂಧನ ಮೂಲಸೌಕರ್ಯಗಳಿಗೆ ಸಂಬಂಧಿಸಿ ಒಂದು ತಿಂಗಳ ಕದನ ವಿರಾಮವನ್ನು ಪ್ರಸ್ತಾಪಿಸಿವೆ' ಎಂದರು. ಇಂತಹ ನಡೆಗಳು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸದಾಶಯವನ್ನು ಸಾಬೀತುಪಡಿಸಲು ನೆರವಾಗಲಿದೆ. ಒಂದು ವೇಳೆ ಅವರು ಕದನ ವಿರಾಮಕ್ಕೆ ಬದ್ಧರಾಗಿದ್ದರೆ ಆ ಬಳಿಕ ನಿಜವಾದ ಶಾಂತಿ ಮಾತುಕತೆ ಆರಂಭಗೊಳ್ಳಲಿದೆ. ನಾವು ಸದೃಢ ಮತ್ತು ಶಾಶ್ವತ ಶಾಂತಿಯನ್ನು ಬಯಸುತ್ತೇವೆ' ಎಂದು ಮ್ಯಾಕ್ರೋನ್ ಹೇಳಿದ್ದಾರೆ.
ಮ್ಯಾಕ್ರೋನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಟನ್ನ ಸಶಸ್ತ್ರ ಪಡೆಗಳ ಸಚಿವ ಲ್ಯೂಕ್ ಪೊಲಾರ್ಡ್ `ಮಾತುಕತೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದಿವೆ. ಒಂದು ತಿಂಗಳ ಕದನ ವಿರಾಮ ಯೋಜನೆಯ ಕುರಿತೂ ಚರ್ಚೆ ನಡೆದಿದೆ, ಆದರೆ ಅಂತಿಮಗೊಂಡಿಲ್ಲ. ಆದರೆ ಉಕ್ರೇನ್ನಲ್ಲಿ ಶಾಶ್ವತ ಶಾಂತಿ ಸ್ಥಾಪನೆಯ ಮಾರ್ಗದ ಬಗ್ಗೆ ಫ್ರಾನ್ಸ್ ಹಾಗೂ ನಮ್ಮ ಯುರೋಪಿಯನ್ ಮಿತ್ರರ ಜತೆ ವಿಸ್ತøತ ಚರ್ಚೆ ನಡೆದಿದೆ' ಎಂದಿದ್ದಾರೆ.
ಒತ್ತಡ ಹೇರುವ ಮೂಲಕ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಸಂಧಾನದ ಮೇಜಿಗೆ ಅಮೆರಿಕ ಕರೆತರಬೇಕೆಂದು ನಾವು ಬಯಸುತ್ತೇವೆ. ಉಕ್ರೇನ್ನಲ್ಲಿ ರಶ್ಯದ ಆಕ್ರಮಣವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿ ಸ್ಥಾಪನೆಗೆ ಈ ಕ್ರಮ ಪೂರಕವಾಗಲಿದೆ ಎಂದು ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್ ನೋಯಲ್ ಬ್ಯಾರಟ್ ಹೇಳಿದ್ದಾರೆ.