ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡಲು ಬ್ರಿಟನ್ ಹಿಂದೇಟು | ಎಲ್ಲಿದ್ದಾರೆ ಬಾಂಗ್ಲಾದ ಮಾಜಿ ಪ್ರಧಾನಿ?
ಹೊಸದಿಲ್ಲಿ : ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಒಂದು ದಿನದ ನಂತರ, ಅವರನ್ನು ಕರೆತಂದಿದ್ದ ಬಾಂಗ್ಲಾ ಸೇನೆಯ ಹೆಲಿಕಾಪ್ಟರ್ ಗಾಝಿಯಾಬಾದ್‌ನ ಹಿಂಡನ್ ವಾಯುನೆಲೆಯಿಂದ ಅವರನ್ನು ಬಿಟ್ಟು ಬಾಂಗ್ಲಾದೇಶಕ್ಕೆ ಹಾರಿದೆ.
ಶೇಖ್ ಹಸೀನಾ ಲಂಡನ್‌ಗೆ ತೆರಳಿ ರಾಜಕೀಯ ಆಶ್ರಯ ಪಡೆಯುವ ನಿರೀಕ್ಷೆಯಿದೆ. ಭಾರತದಿಂದ ಲಂಡನ್‌ಗೆ ತೆರಳುವ ಯೋಜನೆಯನ್ನು ಶೇಖ್ ಹಸೀನಾ ಹೊಂದಿದ್ದರು. ಆದರೆ, ಅವರ ಮುಂದಿನ ಪ್ರಯಾಣಕ್ಕೆ ಅನಿರೀಕ್ಷಿತ ತಡೆಯುಂಟಾಗಿದೆ. ಹೀಗಾಗಿ ಮುಂದಿನ ಒಂದೆರೆಡು ದಿನ ಭಾರತದಲ್ಲೇ ಅವರು ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಸೀನಾ ಅವರು ರಾಜಕೀಯ ಆಶ್ರಯಕ್ಕೆ ಸಂಬಂಧಿಸಿದಂತೆ ಬ್ರಿಟನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಸಂಜೆ ದಿಲ್ಲಿಗೆ ಸಮೀಪದ ಉತ್ತರ ಪ್ರದೇಶದ ಗಾಝಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಹಸೀನಾ ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ. ಭಾರತ ಸರಕಾರದಿಂದ ಬಿಗಿಭದ್ರತೆಯನ್ನೂ ನೀಡಲಾಗಿದೆ.
ಹಸೀನಾ ಅವರಿಗೆ ಯಾವುದೇ ತನಿಖೆ ಎದುರಿಸಬೇಕಾಗಿ ಬಂದರೆ ಅದಕ್ಕೆ ಬ್ರಿಟನ್ ಸರಕಾರದಿಂದ ಯಾವುದೇ ಕಾನೂನಾತ್ಮಕ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ ನಂತರ, ತಮ್ಮ ಯೋಜನೆಯನ್ನು ಒಂದೆರಡು ದಿನಗಳ ಮಟ್ಟಿಗೆ ಅವರು ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ವರದಿಯ ಪ್ರಕಾರ ಅವರು ಫಿನ್ಲ್ಯಾಂಡ್ ಗೆ ಪ್ರಯಾಣ ಬೆಳೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಶೇಖ್ ಹಸೀನಾ ಅವರು ಹೊಸದಿಲ್ಲಿಯಲ್ಲಿ ವಿಶ್ವಸಂಸ್ಥೆಗಾಗಿ ಕೆಲಸ ಮಾಡುತ್ತಿರುವ ಮಗಳು ಸೈಮಾ ವಾಝೇದ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಂಡನ್‌ಗೆ ಪ್ರಯಣಿಸುವ ತಮ್ಮ ಯೋಜನೆಯನ್ನು ಭಾರತಕ್ಕೆ ತಿಳಿಸಿಯೇ ಅವಾಮಿ ಲೀಗ್‌ನ ನಾಯಕಿ ಶೇಖ್ ಹಸೀನಾ ಭಾರತ ಪ್ರವೇಶಿಸಿದ್ದರು. ತುರ್ತಾಗಿ ಭಾರತೀಯ ವಾಯು ಪ್ರದೇಶ ಪ್ರವೇಶಿಸಲು ಬಾಂಗ್ಲಾ ಸೇನೆಯ ಹೆಲಿಕಾಪ್ಟರ್ ಅನುಮತಿಯನ್ನೂ ಕೇಳಿತ್ತು. ಅದರಂತೆ ವಿದೇಶಾಂಗ ಸಚಿವಾಲಯವು ಅನುಮತಿ ನೀಡಿತು. ಆ ಬಳಿಕ ಶೇಖ್ ಹಸೀನಾ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು.
ಈ ಮಧ್ಯೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮ್ಮಿ ಅವರು, “ಬಾಂಗ್ಲಾದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹಿಂಸಾಚಾರಕ್ಕೆ ಹಲವು ಜೀವಗಳು ಬಲಿಯಾಗಿವೆ. ಈ ಕುರಿತು ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ಮತ್ತು ಸವಿಸ್ತಾರವಾದ ತನಿಖೆ ನಡೆಯಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿಕೆ ನೀಡಿದ್ದಾರೆ.
ಬ್ರಿಟನ್ ಸರಕಾರದ ಈ ನಡೆಯಿಂದಾಗಿ ಹಸೀನಾ ಅವರ ಮುಂದಿನ ಪ್ರಯಾಣದ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ಒಂದೆರೆಡು ದಿನ ಭಾರತದಲ್ಲೇ ಆಶ್ರಯ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.