ಕ್ಯಾನ್ಸರ್ ರೋಗಿಗಳಿಗೆ 7 ನಿಮಿಷದಲ್ಲಿ ಚಿಕಿತ್ಸೆ ನೀಡುವ ಲಸಿಕೆಗೆ ಬ್ರಿಟನ್ನ ಆರೋಗ್ಯ ಇಲಾಖೆ ಅನುಮೋದನೆ
ಸಾಂದರ್ಭಿಕ ಚಿತ್ರ \ Photo: PTI
ಲಂಡನ್: ಕ್ಯಾನ್ಸರ್ ರೋಗಿಗಳಿಗೆ 7 ನಿಮಿಷದಲ್ಲಿ ಚಿಕಿತ್ಸೆ ನೀಡುವ ವಿಶ್ವದಲ್ಲೇ ಪ್ರಥಮ ಇಂಜೆಕ್ಷನ್ ಅನ್ನು ಬ್ರಿಟನ್ನ ಆರೋಗ್ಯ ಇಲಾಖೆ ಅನುಮೋದಿಸಿದೆ ಎಂದು ವರದಿಯಾಗಿದೆ.
`ಇಮ್ಯುನೊಥೆರಪಿ, ಅಟೆಝೋಲಿಜುಮಾಬ್ ನೊಂದಿಗೆ ಚಿಕಿತ್ಸೆ ಪಡೆದ ನೂರಾರು ಅರ್ಹ ರೋಗಿಗಳಿಗೆ `ಚರ್ಮದ ಅಡಿಯಲ್ಲಿ' ನೀಡುವ ಇಂಜೆಕ್ಷನ್ ಅನ್ನು ರೂಪಿಸಲಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ವೈದ್ಯರ ತಂಡಕ್ಕೆ ಸಮಯವನ್ನು ಉಳಿಸಲಿದೆ. ಈ ಲಸಿಕೆಗೆ ಔಷಧ ಮತ್ತು ಆರೋಗ್ಯರಕ್ಷಣೆ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ಲಭಿಸಿದೆ ಎಂದು ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ಎಚ್ಎಸ್) ಹೇಳಿದೆ.
ಟೆಸೆಂಟ್ರಿಕ್ ಎಂದೂ ಕರೆಯಲಾಗುವ ಅಟೆಝೋಲಿಜುಮಾಬ್ ಇಂಜೆಕ್ಷನ್ ಅನ್ನು ಕ್ಯಾನ್ಸರ್ ರೋಗಿಗಳಿಗೆ ಡ್ರಿಪ್ ಮೂಲಕ ರಕ್ತನಾಳಕ್ಕೆ ನೀಡಲಾಗುತ್ತಿದ್ದು ಇದು ಸಾಮಾನ್ಯವಾಗಿ 30 ನಿಮಿಷ ಅಥವಾ ಕೆಲವೊಮ್ಮೆ 1 ಗಂಟೆಯ ಚಿಕಿತ್ಸೆಯಾಗಿದೆ. ಆದರೆ ಹೊಸ ಲಸಿಕೆಯನ್ನು ಕೇವಲ 7 ನಿಮಿಷಗಳಲ್ಲಿ ರೋಗಿಗಳಿಗೆ ನೇರವಾಗಿ ನೀಡಬಹುದು. ಇದರಿಂದ ರೋಗಿಗಳು ಬೇಗನೆ ಚೇತರಿಸಿಕೊಳ್ಳುವುದರ ಜತೆಗೆ, ನಮ್ಮ ವೈದ್ಯರ ತಂಡಕ್ಕೆ ಇನ್ನಷ್ಟು ಮಂದಿಗೆ ಚಿಕಿತ್ಸೆ ಒದಗಿಸುವ ಅಮೂಲ್ಯ ಸಮಯಾವಕಾಶ ಒದಗಿಸಲಿದೆ ಎಂದು ಎನ್ಎಚ್ಎಸ್ ಮಾಹಿತಿ ನೀಡಿದೆ.