ಅನುಚಿತ ಹೇಳಿಕೆ: ಬ್ರಿಟನ್ ಸಚಿವರ ವಜಾ
ಲಂಡನ್: ಅನುಚಿತ ಹೇಳಿಕೆ ನೀಡಿದ ಕಾರಣಕ್ಕೆ ಸಹಾಯಕ ಆರೋಗ್ಯ ಸಚಿವ ಆ್ಯಂಡ್ರೂ ಗ್ವಿನ್ನೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.
ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಆದರೂ ತನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಗ್ವಿನ್ನೆ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಧಾನಿ ಈ ಕ್ರಮ ಕೈಗೊಂಡಿದ್ದಾರೆ. ಗ್ವಿನ್ನೆಯನ್ನು ಲೇಬರ್ ಪಕ್ಷದಿಂದಲೂ ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ಸಂಸದೀಯ ಕ್ಷೇತ್ರವೊಂದನ್ನು `ಟ್ರಕ್‍ನಿಂದ ಕೆಳಗೆ ತಳ್ಳಲ್ಪಟ್ಟ ವಸ್ತು' ಎಂದು ವಾಟ್ಸ್ಯಾಪ್ ಗ್ರೂಫ್‍ನಲ್ಲಿ ತಮಾಷೆ ಮಾಡಿ ಸಂದೇಶ ಕಳುಹಿಸಿದ್ದರು. ಮತ್ತೊಂದು ಘಟನೆಯಲ್ಲಿ `ಕಸದ ತೊಟ್ಟಿಯ ಬಗ್ಗೆ ಸಹೋದ್ಯೋಗಿಯನ್ನು ವಿಚಾರಿಸಿದ 72 ಮಹಿಳೆಯೊಬ್ಬರ ಕುರಿತ ವಾಟ್ಸ್ಯಾಪ್ ಸಂದೇಶಕ್ಕೆ `ಈಕೆ ಶೀಘ್ರದಲ್ಲೇ ಸಾಯುತ್ತಾರೆ' ಎಂದು ಪ್ರತಿಕ್ರಿಯಿಸಿದ್ದರು.
ಈ ಸಂದೇಶಗಳ ಬಗ್ಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿತ್ತು. ಸರಕಾರದ ಕಚೇರಿಗಳಲ್ಲಿ ಉನ್ನತ ಮಟ್ಟದ ನಡವಳಿಕೆಯನ್ನು ಎತ್ತಿಹಿಡಿಯಲು ಮತ್ತು ದುಡಿಯುವ ಜನರ ಸೇವೆಯಲ್ಲಿ ಸರಕಾರವನ್ನು ಮುನ್ನಡೆಸಲು ಪ್ರಧಾನಿ ದೃಢನಿರ್ಧಾರ ಮಾಡಿದ್ದಾರೆ' ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.