ಭಾರತ-ಕೆನಡಾ ಉದ್ವಿಗ್ನತೆ ಶಮನಕ್ಕೆ ಬ್ರಿಟನ್ ಪ್ರಧಾನಿ ಸುನಕ್ ಒತ್ತಾಯ
Photo: NDTV
ಲಂಡನ್ : ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ತೀವ್ರತೆ ತಗ್ಗುವ ವಿಶ್ವಾಸವಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶನಿವಾರ ಹೇಳಿದ್ದಾರೆ.
`ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಜತೆ ಶುಕ್ರವಾರ ಫೋನ್ನಲ್ಲಿ ಮಾತನಾಡಿದ ಸುನಕ್ ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ತತ್ವಗಳನ್ನು ಒಳಗೊಂಡಂತೆ ಎಲ್ಲಾ ದೇಶಗಳು ಸಾರ್ವಭೌಮತ್ವ ಮತ್ತು ಕಾನೂನಿನ ನಿಯಮವನ್ನು ಗೌರವಿಸಬೇಕು ಎಂಬ ಬ್ರಿಟನ್ನ ನಿಲುವನ್ನು ಪುನರುಚ್ಚರಿಸಿದರು. ಪರಿಸ್ಥಿತಿ ಉಲ್ಬಣಗೊಳ್ಳದಂತೆ ಕೆನಡಾ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು' ಎಂದು ಬ್ರಿಟನ್ ಪ್ರಧಾನಿಯ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಗ್ಲಾಸ್ಗೋದ ಗುರುದ್ವಾರ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅಡ್ಡಿಪಡಿಸಿದ ಘಟನೆಯ ಬಗ್ಗೆ ಕಳವಳವಿದೆ. ವಿದೇಶಿ ರಾಜತಾಂತ್ರಿಕರ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮಹತ್ವದಾಗಿದ್ದು ಬ್ರಿಟನ್ನಲ್ಲಿರುವ ನಮ್ಮ ಪ್ರಾರ್ಥನಾ ಮಂದಿರಗಳು ಎಲ್ಲರಿಗೂ ತೆರೆದಿರುವುದು ಅತ್ಯಗತ್ಯವಾಗಿದೆ' ಎಂದು ಭಾರತ-ಪೆಸಿಫಿಕ್ ಕುರಿತ ಬ್ರಿಟನ್ ವಿದೇಶಾಂಗ ಸಚಿವಾಲಯದ ವಿಭಾಗ ಟ್ವೀಟ್ ಮಾಡಿದೆ.