ಉಕ್ರೇನ್ ಅಧ್ಯಕ್ಷರ ಆಪ್ತನಾಗಿದ್ದ ಉದ್ಯಮಿ ಕೊಲೊಮೊಯಿಸ್ಕಿ ಬಂಧನ
Photo: twitter/@DD_Geopolitics
ಕೀವ್: ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಉಕ್ರೇನ್ನ ಕೋಟ್ಯಾಧಿಪತಿ ಉದ್ಯಮಿ ಇಗೋರ್ ಕೊಲೊಮೊಯಿಸ್ಕಿಯನ್ನು ಎರಡು ತಿಂಗಳು ಬಂಧನದಲ್ಲಿಡುವಂತೆ ಕೀವ್ನ ನ್ಯಾಯಾಲಯ ಆದೇಶಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯವರ ಪರ ಪ್ರಚಾರ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಲೊಮೊಯಿಸ್ಕಿಯನ್ನು 60 ದಿನ ವಿಚಾರಣಾ ಪೂರ್ವ ಬಂಧನದಲ್ಲಿ ಇರಿಸುವಂತೆ ಕೀವ್ ನ್ಯಾಯಾಲಯ ಶನಿವಾರ ಆದೇಶಿಸಿರುವುದಾಗಿ `ಉಕ್ರಿನ್ಫಾರ್ಮ್' ವರದಿ ಮಾಡಿದೆ. ಉಕ್ರೇನ್ನ ಪ್ರಮುಖ ಖಾಸಗಿ ವಲಯದ ಬ್ಯಾಂಕ್ `ಪ್ರೈವಟ್ಬ್ಯಾಂಕ್'ನ ಮಾಲಕರಾಗಿದ್ದ ಕೊಲೊಮೊಯಿಸ್ಕಿ, ಜತೆಗೆ ಟಿವಿ ಚಾನೆಲ್ ಒಂದನ್ನೂ ಹೊಂದಿದ್ದರು. 2016ರಲ್ಲಿ ಪ್ರೈವೆಟ್ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು.
ಆರಂಭದ ದಿನಗಳಲ್ಲಿ ಕೊಲೊಮೊಯಿಸ್ಕಿಯ ಟಿವಿ ಚಾನೆಲ್ನ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಝೆಲೆನ್ಸ್ಕಿ ಕ್ರಮೇಣ ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಿದೇಶದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೊಲೊಮೊಯಿಸ್ಕಿಯ ಸಂಸ್ಥೆಗಳ ವಿರುದ್ಧ ಅಮೆರಿಕ ದಿಗ್ಬಂಧನ ಜಾರಿಗೊಳಿಸಿದೆ.