ಕೈರೋ ಶೃಂಗಸಭೆ: ಇಸ್ರೇಲ್ ಕ್ರಮಕ್ಕೆ ವ್ಯಾಪಕ ಖಂಡನೆ
Photo: twitter.com/MohamedBinZayed
ಕೈರೊ: ಗಾಝಾದಲ್ಲಿ ಇಸ್ರೇಲ್ ಕೈಗೊಂಡಿರುವ ಮಿಲಿಟರಿ ಕ್ರಮವನ್ನು ಶನಿವಾರ ಕೈರೊದಲ್ಲಿ ನಡೆದ ಅರಬ್ ಶೃಂಗಸಭೆಯಲ್ಲಿ ಈಜಿಪ್ಟ್ ಹಾಗೂ ಜೋರ್ಡಾನ್ ಕಟುವಾಗಿ ಟೀಕಿಸಿವೆ. ಪಾಶ್ಚಿಮಾತ್ಯ ಮಿತ್ರಕೂಟದಲ್ಲಿ ಇದ್ದುಕೊಂಡು, ದಶಕದ ಹಿಂದೆ ಇಸ್ರೇಲ್ ಜತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದ ಎರಡು ದೇಶಗಳು ಇಸ್ರೇಲ್- ಹಮಾಸ್ ದಾಳಿಯಿಂದ ತಾಳ್ಮೆ ಕಳೆದುಕೊಂಡಿರುವುದು ಇದರಿಂದ ಸ್ಪಷ್ಟವಾಗಿದೆ.
ಈಜಿಪ್ಟ್ ಅಧ್ಯಕ್ ಅಬ್ದೆಲ್ ಫತೇಹ್ ಅಲ್-ಸೀಸಿ ಈ ಶೃಂಗದ ಆತಿಥ್ಯ ವಹಿಸಿದ್ದು, ಗಾಝಾದ 23 ಲಕ್ಷ ಮಂದಿ ಫೆಲಸ್ತೀನಿಯರನ್ನು ಸಿನಾಯ್ ಪರ್ಯಾಯ ದ್ವೀಪಕ್ಕೆ ಓಡಿಸುವ ಸಂಬಂಧ ಯಾವುದೇ ಮಾತುಕತೆಯ ಪ್ರಸ್ತಾವವನ್ನು ತಿರಸ್ಕರಿಸುವುದಾಗಿ ಅವರು ಸ್ಪಷ್ಟಪಡಿಸಿದರು. "ಫೆಲಸ್ತೀನಿಯನ್ನರ ಬೇಡಿಕೆಯನ್ನು ಸಮಾಪನಗೊಳಿಸುವ" ವಿರುದ್ಧ ಎಚ್ಚರಿಕೆ ನೀಡಿದರು.
"ಗಾಝಾದಲ್ಲಿ ಇಸ್ರೇಲ್ ಆಕ್ರಮಣ ಹಾಗೂ ಬಾಂಬ್ ಮಳೆಗೆರೆದಿರುವ ಕ್ರಮ "ಯುದ್ಧಾಪರಾಧ" ಎಂದು ಜೋರ್ಡಾನ್ ದೊರೆ ಅಬ್ದುಲ್ಲಾ ಹೇಳಿದರು.
ಈ ಪ್ರದೇಶದಲ್ಲಿ ಆಕ್ರೋಶ ಮತ್ತಷ್ಟು ಬೆಳೆಯುತ್ತಿರುವುದನ್ನು ಉಭಯ ಮುಖಂಡರ ಭಾಷಣಗಳು ಪ್ರತಿಬಿಂಬಿಸಿವೆ. ಇಸ್ರೇಲ್ ಜತೆ ನಿಕಟ ಸಂಬಂಧ ಹೊಂದಿರುವ ಹಾಗೂ ಮಧ್ಯಸ್ಥಿಕೆಗಾರರಾಗಿ ಕೆಲಸ ಮಾಡುತ್ತಿದ್ದವರಲ್ಲಿ ಕೂಡಾ ಈ ಸಂಘರ್ಷ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಫೆಲಸ್ತೀನಿಯರು ದೊಡ್ಡ ಸಂಖ್ಯೆಯಲ್ಲಿ ಗಡಿಯೊಳಕ್ಕೆ ಬರುತ್ತಿರುವ ಬಗ್ಗೆ ಈಜಿಪ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಫೆಲಸ್ತೀನ್ ದೇಶದ ನಿರೀಕ್ಷೆಯೇ ಹುಸಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇಸ್ರೇಲ್ ರಾಜಕಾರಣಿಗಳು ಹಾಗೂ ಮಿಲಿಟರಿ ಅಧಿಕಾರಿಗಳ ಗೊಂದಲಕಾರಿ ಹೇಳಿಕೆಗಳಿಂದಾಗಿ ಫೆಲಸ್ತೀನಿಯನ್ನರು ಗಾಝಾ ಪ್ರದೇಶವನ್ನು ತೊರೆದು ದಕ್ಷಿಣಕ್ಕೆ, ಈಜಿಪ್ಟ್ ನತ್ತ ಸ್ಥಳಾಂತರಗೊಳ್ಳುತ್ತಿದ್ದಾರೆ.