ಕೆನಡಾದಿಂದ ಅಮೆರಿಕದ ಆಮದಿನ ಮೇಲೆ 25% ಸುಂಕ ಘೋಷಣೆ

ಜಸ್ಟಿನ್ ಟ್ರೂಡೊ | PC : NDTV
ಟೊರಂಟೊ: ಕೆನಡಾಕ್ಕೆ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ 25% ಸುಂಕ ವಿಧಿಸುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಘೋಷಿಸುವುದರೊಂದಿಗೆ ಉತ್ತರ ಅಮೆರಿಕನ್ ವ್ಯಾಪಾರ ಯುದ್ಧ ಶನಿವಾರ ಮಧ್ಯರಾತ್ರಿಯಿಂದ ಅಧಿಕೃತವಾಗಿ ಪ್ರಾರಂಭಗೊಂಡಂತಾಗಿದೆ.
ಒಟ್ಟಾವದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಟ್ರೂಡೊ ಎರಡೂ ದೇಶಗಳ ನಡುವಿನ ನಿಕಟ ಸಂಬಂಧಗಳನ್ನು ಮೆಲುಕು ಹಾಕಿದರು. ಬಳಿಕ ಮಂಗಳವಾರದಿಂದ (ಫೆಬ್ರವರಿ 4ರಿಂದ) ಅಮೆರಿಕದ ಆಮದುಗಳ ಮೇಲೆ 25% ಸುಂಕ ಜಾರಿಗೆ ಬರುವುದಾಗಿ ಘೋಷಿಸಿದರು.
`ಈ ಪರಿಸ್ಥಿತಿಯನ್ನು, ಈ ಕ್ರಮವನ್ನು ನಾವು ಬಯಸಿರಲಿಲ್ಲ. ಆದರೆ ಕೆನಡಾ ಪ್ರಜೆಗಳ ಪರವಾಗಿ ನಿಲ್ಲಲು ನಾವು ಹಿಂಜರಿಯುವುದಿಲ್ಲ' ಎಂದು ಟ್ರೂಡೊ ಹೇಳಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವೆಲ್ಲಾ ಒಗ್ಗೂಡಿ ನಿಲ್ಲಬೇಕು ಎಂದು ಟ್ರೂಡೊ ಪ್ರತಿಪಾದಿಸಿದರು. ಕೆನಡಾದ ಆಮದಿನ ಮೇಲೆ 25% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಬಳಿಕ ಸಚಿವ ಸಂಪುಟದ ಮತ್ತು ಪ್ರಾಂತೀಯ ಸರಕಾರಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಟ್ರೂಡೊ, ಸಭೆಯ ಬಳಿಕ ಮೆಕ್ಸಿಕೋ ಅಧ್ಯಕ್ಷೆ ಕ್ಲಾಡಿಯಾ ಶೀನ್ಬಾಮ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.