ಕೆನಡಾ | ಬಿಯಾಂತ್ ಸಿಂಗ್ ಹತ್ಯೆಗೈದವನಿಗೆ ಶ್ರದ್ದಾಂಜಲಿ ಸಲ್ಲಿಸಿದ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಗುಂಪು
ಟೊರಂಟೊ : ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗ್‍ರನ್ನು 1995ರಲ್ಲಿ ಬಾಂಬ್ ದಾಳಿ ನಡೆಸಿ ಹತ್ಯೆಗೈದಿದ್ದ ದಿಲಾವರ್ ಸಿಂಗ್ ಬಬ್ಬರ್ ಗೆ ಕೆನಡಾದಲ್ಲಿ ಖಾಲಿಸ್ತಾನ್ ಪರ ತೀವ್ರವಾದಿಗಳ ಗುಂಪು ಶನಿವಾರ ಶ್ರದ್ದಾಂಜಲಿ ಸಲ್ಲಿಸಿದೆ.
ಖಾಲಿಸ್ತಾನ್ ಪರ ಗುಂಪು ವಾಂಕೋವರ್‍ನಲ್ಲಿ ಭಾರತೀಯ ಕಾನ್ಸುಲೇಟ್‍ವರೆಗೆ ಟ್ಯಾಬ್ಲೋ ಸಹಿತ ರ‍್ಯಾಲಿ ನಡೆಸಿದೆ. ಬಾಂಬ್ ದಾಳಿಯಲ್ಲಿ ಛಿದ್ರಗೊಂಡಿರುವ, ರಕ್ತದ ಕಲೆ ಅಂಟಿರುವ ಕಾರು, ಅದರ ಎದುರು ಮೃತ ಬಿಯಾಂತ್ ಸಿಂಗ್ ಅವರ ಫೋಟೋ, ಅದರ ಕೆಳಗೆ `ಬಾಂಬ್‍ನಿಂದ ಬಿಯಾಂತಾ ಹತನಾದ' ಎಂಬ ಬರಹವನ್ನು ಹೊಂದಿದ್ದ ಟ್ಯಾಬ್ಲೋದ ಜತೆಗೆ ಬಾಂಬ್ ದಾಳಿ ನಡೆಸಿದ್ದ ದಿಲಾವರ್ ಸಿಂಗ್ ಬಬ್ಬರ್ ಗೆ ಶ್ರದ್ದಾಂಜಲಿಯನ್ನೂ ಸಲ್ಲಿಸಲಾಗಿದೆ. 1995ರ ಆಗಸ್ಟ್ 31ರಂದು ಬಾಂಬ್ ದಾಳಿಯಲ್ಲಿ ಬಿಯಾಂತ್ ಸಿಂಗ್ ಹತ್ಯೆಯಾಗಿತ್ತು.
ಇದೇ ರೀತಿಯ ಜಾಥಾಗಳನ್ನು ಟೊರಂಟೊದಲ್ಲಿಯೂ ಇಂದರ್‍ಜಿತ್ ಸಿಂಗ್ ಗೊಸಾಲ್ ನೇತೃತ್ವದಲ್ಲಿ ನಡೆಸಲಾಗಿದೆ. ಈ ಸಂದರ್ಭ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೊಸಾಲ್ ` ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹ ದಿಲಾವರ್ ಸಿಂಗ್‍ನ ಕಲ್ಪನೆಯ ಕೂಸು' ಎಂದು ಬಣ್ಣಿಸಿರುವುದಾಗಿ ವರದಿಯಾಗಿದೆ. ಖಾಲಿಸ್ತಾನ್ ಪ್ರತ್ಯೇಕತಾವಾದಿ ಗುಂಪು `ಸಿಖ್ಸ್ ಫಾರ್ ಜಸ್ಟಿಸ್'ನ ಪ್ರಧಾನ ಕಾರ್ಯದರ್ಶಿಯಾಗಿರುವ ಗುರುಪತ್ವಂತ್ ಸಿಂಗ್ ಪನ್ನೂನ್‍ನ ನಿಕಟವರ್ತಿಯಾಗಿರುವ ಗೊಸಾಲ್‍ಗೆ ಜೀವ ಬೆದರಿಕೆ ಇರುವುದಾಗಿ ಕಳೆದ ಆಗಸ್ಟ್ ನಲ್ಲಿ ಕೆನಡಾದ ಕಾನೂನು ಜಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.