ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ, ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ : ಮತ್ತೆ ಆರೋಪಿಸಿದ ಕೆನಡಾ
ಸಾಂದರ್ಭಿಕ ಚಿತ್ರ | NDTV
ಹೊಸದಿಲ್ಲಿ: ಕೆನಡಾದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಮಧ್ಯಪ್ರವೇಶಿಸಲು ಪ್ರಯತ್ನಿಸುವ ಅಥವಾ ಹಸ್ತಕ್ಷೇಪ ನಡೆಸುವ ಸಾಧ್ಯತೆ ಇದೆ ಎಂದು ಕೆನಡಾದ ಬೇಹುಗಾರಿಕಾ ಸಂಸ್ಥೆಯು ಹೇಳಿಕೊಂಡಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿರುವ ಮಧ್ಯೆಯೇ ಈ ಹೇಳಿಕೆ ಹೊರ ಬಿದ್ದಿದೆ. ಭಾರತ- ಕೆನಡಾ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ಕೆನಡಾದ ಗುಪ್ತಚರ ಸೇವೆ ಉಪನಿರ್ದೇಶಕಿ ವನೆಸ್ಸಾ ಲಾಯ್ಡ್ ಮಾತನಾಡಿ, ಚೀನಾ ದೇಶವು ಈ ಪ್ರಸ್ತುತ ಚುನಾವಣೆಯಲ್ಲಿ ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಕ್ಕೆ ಪ್ರಯತ್ನಿಸಲು AI ಸಾಧನಗಳನ್ನು ಬಳಸುವ ಸಾಧ್ಯತೆ ಇದೆ. ಇದಲ್ಲದೆ ತನ್ನ ಹಿತಾಸಕ್ತಿಗಳಿಗೆ ಅನುಕೂಲಕರವಾದ ನಿರೂಪಣೆಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುವ ಸಾಧ್ಯತೆ ಇದೆ. ನಿರ್ದಿಷ್ಟವಾಗಿ ಕೆನಡಾದಲ್ಲಿರುವ ಚೀನೀ ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯ ಸಮುದಾಯಗಳನ್ನು ಬಳಸಿಕೊಂಡು ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.
ಭಾರತ ಸರಕಾರ ಕೂಡ ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಪ್ರತಿಪಾದಿಸಲು ಕೆನಡಾದ ಸಮುದಾಯಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ವನೆಸ್ಸಾ ಲಾಯ್ಡ್ ಹೇಳಿದರು.
ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಈ ಮೊದಲು ಕೆನಡಾ ಆರೋಪಿಸಿತ್ತು. ಕೆನಡಾದಲ್ಲಿ 2021ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತವು ತನ್ನ ಏಜೆಂಟ್ಗಳ ಮೂಲಕ ಆದ್ಯತೆಯ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ಒದಗಿಸಲು ಪ್ರಯತ್ನಿಸಿರಬಹುದು ಎಂದು ಕೆನಡಾದ ವಿದೇಶಿ ಹಸ್ತಕ್ಷೇಪ ಆಯೋಗದ ವರದಿಯು ಹೇಳಿತ್ತು. ಆದರೆ ಈ ಕುರಿತ ಆರೋಪವನ್ನು ಭಾರತ ತಿರಸ್ಕರಿಸಿತ್ತು.