ಹೌಸ್ ಆಫ್ ಕಾಮನ್ಸ್ ವಿಸರ್ಜನೆ ಬೆನ್ನಲ್ಲೇ ಚುನಾವಣೆ ದಿನಾಂಕ ಘೋಷಿಸಿದ ಕೆನಡಾ

ಮಾರ್ಕ್ ಕಾರ್ನಿ PC:x.com/gulf_news
ಟೊರಾಂಟೊ: ಕೆನಡಾದ ಹೌಸ್ ಆಫ್ ಕಾಮನ್ಸ್ ವಿಸರ್ಜನೆ ಬೆನ್ನಲ್ಲೇ ಸಂಸತ್ತಿಗೆ ಚುನಾವಣೆ ನಡೆಯುವ ದಿನಾಂಕವನ್ನು ಸರ್ಕಾರ ಪ್ರಕಟಿಸಿದೆ. ಏಪ್ರಿಲ್ 28ರಂದು ಚುನಾವಣೆ ನಡೆಯಲಿದೆ. ಪ್ರಧಾನಿ ಮಾರ್ಕ್ ಕಾರ್ನಿಯವರು ಗವರ್ನರ್ ಜನರಲ್ ಮೇರಿ ಸೈಮನ್ ಅವರನ್ನು ರವಿವಾರ ಒಟ್ಟಾವದಲ್ಲಿ ಭೇಟಿ ಮಾಡಿ ಹೌಸ್ ಆಫ್ ಕಾಮನ್ಸ್ ವಿಸರ್ಜಿಸುವಂತೆ ಕೋರಿದ್ದರು. ಮುಂದಿನ ಸರ್ಕಾರ ರಚನೆಗಾಗಿ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಕೆನಡಾ ಸಂಸತ್ತಿಗೆ ಅಕ್ಟೋಬರ್ 27ರಂದು ಚುನಾವಣೆ ನಡೆಯಬೇಕಿತ್ತು. ಆದರೆ ಆರು ತಿಂಗಳು ಮುಂಚಿತವಾಗಿ ಏಪ್ರಿಲ್ ನಲ್ಲೇ ಮತದಾನ ನಡೆಯಲಿದೆ. ಗವರ್ನರ್ ಜನರಲ್ ಅವರನ್ನು ಭೇಟಿಯಾದ ತಕ್ಷಣ ಕಾರ್ನಿ ಚುನಾವಣಾ ದಿನಾಂಕ ಘೋಷಿಸಿದರು. ಪ್ರಬಲ ಧನಾತ್ಮಕ ಬಹುಮತ ನೀಡುವಂತೆ ಸಹ ಕೆನಡಿಯನ್ನರನ್ನು ಕೋರುತ್ತಿದ್ದೇನೆ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾಗೆ ನೀಡಿದ ಎಚ್ಚರಿಕೆ ಅವರ ಪ್ರಚಾರ ಶೈಲಿಯ ಭಾಷಣದಲ್ಲಿ ಪ್ರಾಮುಖ್ಯ ಪಡೆದಿದೆ. "ನಮ್ಮನ್ನು ಒಡೆಯುವ ಮೂಲಕ ನಮ್ಮ ಒಡೆಯರಾಗಲು ಅವರು ಬಯಸಿದ್ದಾರೆ. ಅದು ಸಂಭವಿಸಲು ನಾವು ಅವಕಾಶ ನೀಡುವುದಿಲ್ಲ. ಟ್ರಂಪ್ ಅವರನ್ನು ತಡೆಯಲು ಹೊಸ ಜನಾದೇಶದ ಅಗತ್ಯವಿದೆ " ಎಂದು ಸ್ಪಷ್ಟಪಡಿಸಿದ್ದಾರೆ.