ಕೆನಡಾ: ಇಸ್ರೇಲ್ ವಿರುದ್ಧ ಪ್ರತಿಭಟನೆ, ನೆತನ್ಯಾಹು ಪ್ರತಿಕೃತಿಗೆ ಬೆಂಕಿ
ಬೆಂಜಮಿನ್ ನೆತನ್ಯಾಹು | PC : PTI
ಮಾಂಟ್ರಿಯಲ್: ಕೆನಡಾದ ಮಾಂಟ್ರಿಯಲ್ ನಗರದಲ್ಲಿ ನೇಟೊ ನಿಯೋಗದ ಉನ್ನತ ಮಟ್ಟದ ಸಭೆಯ ಸಂದರ್ಭ ನಡೆದ ಇಸ್ರೇಲ್ ವಿರೋಧಿ ಮತ್ತು ನೇಟೊ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಹಲವು ಕಾರುಗಳಿಗೆ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ 4 ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಫೆಲೆಸ್ತೀನೀಯರ ನ್ನು ಬೆಂಬಲಿಸಿ ವಿದ್ಯಾರ್ಥಿಗಳ ಗುಂಪೊಂದು ನಗರದಾದ್ಯಂತ ಜಾಥಾ ಹಮ್ಮಿಕೊಂಡಿತ್ತು. ಜಾಥಾಕ್ಕೆ ವಿದ್ಯಾರ್ಥಿಗಳ ಮತ್ತೊಂದು ಗುಂಪು ಸೇರಿಕೊಂಡ ಬಳಿಕ ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿದೆ. ಕೆಲವರು ಪೊಲೀಸರತ್ತ ಸ್ಫೋಟಕ ಹಾಗೂ ಕಲ್ಲುಗಳನ್ನು ಎಸೆದಾಗ ಘರ್ಷಣೆ ಆರಂಭಗೊಂಡಿದ್ದು ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವು ಕಟ್ಟಡಗಳ ಕಿಟಕಿ ಗ್ಲಾಸುಗಳಿಗೆ ಹಾನಿಯಾಗಿದೆ ಎಂದು ಪೊಲೀಸ್ ವಕ್ತಾರರನ್ನು ಉಲ್ಲೇಖಿಸಿ `ದಿ ಮಾಂಟ್ರಿಯಲ್ ಗಝೆಟ್' ವರದಿ ಮಾಡಿದೆ.
ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು ಪೊಲೀಸರ ಮೇಲೆ ಹಲ್ಲೆ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 4 ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.