ಕೆನಡಾ: ಸುಲಿಗೆ ಪ್ರಯತ್ನ, 5 ಮಂದಿಯ ಬಂಧನ
Photo:NDTV
ಟೊರಂಟೊ: ಭಾರತ ಮೂಲದ ಕೆನಡಿಯನ್ ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರೇಟರ್ ಟೊರಂಟೊ ಪ್ರದೇಶದಲ್ಲಿ 5 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬ್ರಾಂಪ್ಟನ್ ನಗರದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿ, ಸುಲಿಗೆ ತನಿಖಾ ಕಾರ್ಯಪಡೆಯ ಮುಖ್ಯಸ್ಥ ಶೆಲ್ಲಿ ಥಾಮ್ಸನ್ `ಈ ಪ್ರಕರಣದಲ್ಲಿ ಭಾರತಕ್ಕೆ ಸಂಪರ್ಕವಿದೆಯೇ ಎಂಬ ಬಗ್ಗೆ ವಿಸ್ತೃತ ತನಿಖೆಯ ಅಗತ್ಯವಿದೆ. ಇದುವರೆಗಿನ ಮಾಹಿತಿ ಪ್ರಕಾರ, ಯಾವುದೇ ಸಂಪರ್ಕವಿಲ್ಲ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಕಾರ್ಯಪಡೆ ತ್ವರಿತ ಕ್ರಮ ಕೈಗೊಂಡಿದ್ದು 5 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಮಾಹಿತಿಯಿದ್ದವರು ಕಾರ್ಯಪಡೆಯನ್ನು ಸಂಪರ್ಕಿಸಬೇಕು' ಎಂದು ಹೇಳಿದ್ದಾರೆ.
ಬಂಧಿತರನ್ನು ಬ್ರಾಂಪ್ಟನ್ ನಿವಾಸಿಗಳಾದ ಗಗನ್ ಅಜಿತ್ ಸಿಂಗ್, ಹಷ್ಮೀತ್ ಕೌರ್ ಮತ್ತು ಲಿಮನ್ಜೋತ್ ಕೌರ್, ಮಿಸಿಸೌಗದ ನಿವಾಸಿ ಅನ್ಮೋಲ್ದೀಪ್ ಸಿಂಗ್, ಹಾಗೂ ಸ್ಪಷ್ಟ ವಿಳಾಸವಿಲ್ಲದ ಅರುಣ್ದೀಪ್ ಥಿಂಡ್ ಎಂದು ಗುರುತಿಸಲಾಗಿದೆ. ಗ್ರೇಟರ್ ಟೊರಂಟೊ ಪ್ರದೇಶ, ಎಡ್ಮಂಟನ್, ಬ್ರಿಟಿಷ್ ಕೊಲಂಬಿಯಾದ ಲೋವರ್ ಮೈನ್ಲ್ಯಾಂಡ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ನಿಂದ ಉದ್ಯಮಿಗಳ ಸರಣಿ ಅಪಹರಣ ಮತ್ತು ಸುಲಿಗೆ ಪ್ರಕರಣ ವರದಿಯಾಗಿದೆ. ಇವುಗಳಲ್ಲಿ ಕನಿಷ್ಟ 3 ಪ್ರಕರಣಗಳಲ್ಲಿ ಭಾರತ ಮೂಲದ ಸಂಘಟನೆಯ ಕೈವಾಡ, ಅದರಲ್ಲೂ ನಿರ್ದಿಷ್ಟವಾಗಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಕೈವಾಡವನ್ನು ಪೊಲೀಸರು ಶಂಕಿಸಿದ್ದಾರೆ.