ಭಾರತ - ಕೆನಡಾ ಮಧ್ಯೆ ರಾಜತಾಂತ್ರಿಕ ಉದ್ವಿಗ್ನತೆ | ಭಾರತದ ವಿರುದ್ಧ ಸಂಭಾವ್ಯ ನಿರ್ಬಂಧಗಳ ಸುಳಿವು ನೀಡಿದ ಕೆನಡಾ ಸರಕಾರ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (PTI)
ಒಟ್ಟಾವಾ: ಎರಡು ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಭಾರತದ ವಿರುದ್ಧ ಸಂಭಾವ್ಯ ನಿರ್ಬಂಧಗಳ ಕುರಿತು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಸುಳಿವು ನೀಡಿದ್ದಾರೆ.
ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ಎಲ್ಲಾ ಅವಕಾಶಗಳ ಬಗ್ಗೆ ಚಿಂತನೆ ನಡೆದಿದೆ ಎಂದು ಜೋಲಿ ಹೇಳಿದ್ದಾರೆ.
ಕೆನಡಾ ಖಾಲಿಸ್ತಾನಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತಿದೆ ಎಂದು ಭಾರತ ಸರ್ಕಾರವು ಆರೋಪಗಳನ್ನು ಮಾಡಿದ ನಂತರ ಎರಡು ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಿದೆ.
ಎರಡೂ ರಾಷ್ಟ್ರಗಳು ರಾಜತಾಂತ್ರಿಕರನ್ನು ಹೊರಹಾಕಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿದೆ. ಕೆನಡಾ ಆರು ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ. ಭಾರತವೂ ಅದೇ ಮಾರ್ಗದಲ್ಲಿ ನಡೆದಿದೆ. ಆರು ಕೆನಡಾ ರಾಜತಾಂತ್ರಿಕರನ್ನು ದೇಶ ತೊರೆಯಲು ಗಡುವು ನೀಡಿದೆ.
ಜೂನ್ 2023 ರಲ್ಲಿ ಕೆನಡಾದ ಪ್ರಜೆ ಮತ್ತು ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಶಾಮೀಲಾಗಿದ್ದಾರೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಂದ ಉದ್ವಿಗ್ನತೆ ಇನ್ನಷ್ಟು ಉಲ್ಬಣಗೊಂಡಿತು.
ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ನಿಜ್ಜರ್ ಪ್ರಕರಣದಲ್ಲಿ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದೆ. ಇದು ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರಕ್ಕೆ ಕಾರಣವಾಯಿತು ಎಂದು ಜೋಲಿ ಹೇಳಿದರು. ಎರಡೂ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ತನಿಖೆಯಲ್ಲಿ ಭಾರತ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.