ಕೆನಡಾ | ದೇವಸ್ಥಾನದ ಹೊರಗೆ ಗುಂಪು ಸೇರುವುದನ್ನು ತಡೆಯುವ ಆದೇಶ ಜಾರಿ
Photo : freepik
ಟೊರಂಟೊ: ಟೊರಂಟೋದಲ್ಲಿರುವ ಹಿಂದು ದೇವಾಲಯದಲ್ಲಿ ಶನಿವಾರ ನಡೆಯುವ ಭಾರತೀಯ ಕಾನ್ಸುಲರ್ ಶಿಬಿರದ ಸಂದರ್ಭ ದೇವಸ್ಥಾನದ ಆವರಣದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನಾಕಾರರು ಸಭೆ ಸೇರುವುದನ್ನು ತಡೆಯುವ ಆದೇಶವನ್ನು ಕೆನಡಾದ ನ್ಯಾಯಾಲಯ ಜಾರಿಗೊಳಿಸಿದೆ.
ಟೊರಂಟೋದ ಸ್ಕಾರ್ಬೊರೋ ಪ್ರದೇಶದಲ್ಲಿರುವ ಲಕ್ಷ್ಮೀನಾರಾಯಣ ಮಂದಿರದಲ್ಲಿ ನವೆಂಬರ್ 30ರಂದು ಭಾರತೀಯ ಕೌನ್ಸಿಲ್ ಶಿಬಿರ ನಡೆಯುವ ಹಿನ್ನೆಲೆಯಲ್ಲಿ ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ದೇವಸ್ಥಾನದ ಆಡಳಿತ ಮಂಡಳಿ ಒಂಟಾರಿಯೋದ ಸುಪೀರಿಯರ್ ಕೋರ್ಟ್ ಆಫ್ ಜಸ್ಟಿಸ್ಗೆ ಮನವಿ ಮಾಡಿತ್ತು.
ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು `ಅರ್ಜಿದಾರರು ದೇವಸ್ಥಾನದ 100 ಮೀಟರ್ ಪರಿಧಿಯನ್ನು ಅತಿಕ್ರಮಿಸದಂತೆ ಪ್ರತಿಭಟನಾಕಾರರನ್ನು ನಿರ್ಬಂಧಿಸುವ ತಡೆಯಾಜ್ಞೆಯ ಅಗತ್ಯದ ಬಗ್ಗೆ ಒದಗಿಸಿದ ಕಾರಣಗಳು ಸಮರ್ಥನೀಯವಾಗಿದೆ' ಎಂದು ತಿಳಿಸಿ ತಡೆಯಾಜ್ಞೆ ಜಾರಿಗೊಳಿಸಿದ್ದಾರೆ `ಪ್ರತಿಭಟನೆ ಸಂದರ್ಭ ಹಿಂಸಾಚಾರ, ಹಾನಿ ಸಂಭವಿಸದೆ ಇರಬಹುದು. ಆದರೆ ಹಾನಿ ಎಂದರೆ ಹಿಂಸಾಚಾರ ಮಾತ್ರವಲ್ಲ, ಹಿರಿಯ ನಾಗರಿಕರು ದೇವಸ್ಥಾನಕ್ಕೆ ಭೇಟಿ ನೀಡದಂತೆ ಬೆದರಿಸುವ ಸಾಧ್ಯತೆಯೂ ಇರುವುದನ್ನು ಈ ಹಿಂದಿನ ನಿದರ್ಶನಗಳ ಸಹಿತ ಅರ್ಜಿದಾರರು ಉಲ್ಲೇಖಿಸಿದ್ದಾರೆ' ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.