ಟಿಬೆಟಿಯನ್ನರ ಸ್ವ- ನಿರ್ಣಯ ಹಕ್ಕು ಬೆಂಬಲಿಸುವ ನಿರ್ಣಯಕ್ಕೆ ಕೆನಡಾ ಅಂಗೀಕಾರ
Photo : freepik
ಟೊರಂಟೊ : ಟಿಬೆಟಿಯನ್ನರ ಸ್ವ-ನಿರ್ಣಯದ ಹಕ್ಕನ್ನು ಅಂಗೀಕರಿಸುವ ನಿರ್ಣಯವನ್ನು ಕೆನಡಾದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದೆ.
`ಟಿಬೆಟ್ನ ಸ್ವಯಂ ನಿರ್ಣಯದ ಹಕ್ಕನ್ನು ಘೋಷಿಸುವ ನಿರ್ಣಯವನ್ನು ಕೆನಡಾ ಸಂಸತ್ತು ಅಂಗೀಕರಿಸಿದೆ ಎಂದು ಹೇಳಲು ರೋಮಾಂಚನವಾಗುತ್ತಿದೆ ಎಂದು ಕೆನಡಾ ಟಿಬೆಟ್ ಸಮಿತಿ ಸಿಟಿಸಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಚೀನಾವು ಟಿಬೆಟಿಯನ್ನರ ವಿರುದ್ಧ ವ್ಯವಸ್ಥಿತ ಸಾಂಸ್ಕೃತಿಕ ಸಮೀಕರಣದ ನೀತಿಯನ್ನು ನಡೆಸುತ್ತಿದೆ ಮತ್ತು ಟಿಬೆಟಿಯನ್ನರು , ಜನರು ಮತ್ತು ರಾಷ್ಟ್ರವಾಗಿ ಸ್ವಯಂ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಸದನವು ಅವಿರೋಧ ಒಪ್ಪಿಗೆಯ ಮೂಲಕ ಗುರುತಿಸಿದೆ ಎಂದು ನಿರ್ಣಯದ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
`ಟಿಬೆಟಿಯನ್ನರು ತಮ್ಮ ಆರ್ಥಿಕ, ಸಾಮಾಜಿಕ , ಸಾಂಸ್ಕೃತಿಕ ಮತ್ತು ಧಾರ್ಮಿಕ ನೀತಿಗಳನ್ನು ಯಾವುದೇ ಬಾಹ್ಯ ಶಕ್ತಿಗಳ ಹಸ್ತಕ್ಷೇಪವಿಲ್ಲದೆ ಮುಕ್ತವಾಗಿ ಆಯ್ಕೆ ಮಾಡಲು ಅಧಿಕಾರವನ್ನು ಹೊಂದಿದ್ದಾರೆ. ಈ ಸಬಲೀಕರಣವು ಮುಂದಿನ ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ, 14ನೇ ದಲಾಯಿ ಲಾಮಾರ ಉತ್ತರಾಧಿಕಾರಿಯ ಆಯ್ಕೆಯಲ್ಲಿ ಮಧ್ಯಪ್ರವೇಶಿಸದಂತೆ ಚೀನಾವನ್ನು ನಿಷೇಧಿಸುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ. ಇದು 1950ರಲ್ಲಿ ಟಿಬೆಟನ್ನು ಸ್ವಾಧೀನಪಡಿಸಿಕೊಂಡಂದಿನಿಂದ ಟಿಬೆಟ್ ಐತಿಹಾಸಿಕವಾಗಿ ಚೀನಾದ ಭಾಗವಾಗಿದೆ ಎಂಬ ಬೀಜಿಂಗ್ನ ತಪ್ಪು ಮಾಹಿತಿಯ ವಿರುದ್ಧ ಹೋರಾಡುವ ಮೂಲಕ ಟಿಬೆಟಿಯನ್ನರು ತಮ್ಮ ಆಶಯವನ್ನು ಮುನ್ನಡೆಸಲು ನೆರವಾಗಲಿದೆ ಎಂದು ಸಿಟಿಸಿಯ ಕಾರ್ಯನಿರ್ವಾಹಕ ನಿರ್ದೇಶಕ ಶೆರಾಪ್ ಥೆರ್ಚಿನ್ ಹೇಳಿದ್ದಾರೆ.
ಇದು ಕಾನೂನು ಬದ್ಧತೆಯ ನಿರ್ಣಯವಲ್ಲ. ಆದರೆ ಸರಕಾರದ ದಾಖಲೆಯಲ್ಲಿ ಉಳಿಯುತ್ತದೆ. ಇದು ಸಾಮಾನ್ಯ ಮಾನವ ಹಕ್ಕುಗಳ ಕೋನವನ್ನು ಮೀರಿದ ದೊಡ್ಡ ಹೆಜ್ಜೆಯಾಗಿದೆ. ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸರಕಾರವನ್ನು ಉತ್ತೇಜಿಸುವ ಭರವಸೆಯಿದೆ ಎಂದವರು ಹೇಳಿದ್ದಾರೆ.